ಮಂಗಳೂರು:ಒಂದೇ ಬೈಕ್‌ನಲ್ಲಿ ಐವರು ಪ್ರಯಾಣಿಸುತ್ತಿದ್ದ ವಿಡಿಯೋ ವೈರಲ್ ಮಾಡಿದ ಶಾಸಕರು|ಡಿಸಿಪಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹ!
ಮಂಗಳೂರು:ವಾಹನ ಸವಾರರಿಗೆ ಸರ್ಕಾರ ಅದೆಷ್ಟೇ ರೂಲ್ಸ್ ಜಾರಿಗೊಳಿಸಿದರೂ, ಜನರು ಪಾಲಿಸುತ್ತಲೇ ಇಲ್ಲ. ತ್ರಿಬಲ್ ಬೈಕ್ ರೈಡ್,ಲೈಸನ್ಸ್ ಇಲ್ಲದೆ ಹೋಗಿ,ಪೊಲೀಸ್ ಕೈಗೆ ಸಿಕ್ಕಿಬಿದ್ದರೂ ಇಂತಹ ಪ್ರಕರಣಗಳೇನು ಕಮ್ಮಿ ಇಲ್ಲ. ಇದೀಗ ಎಂ.ಜಿ. ರೋಡ್ ನಲ್ಲಿ ಒಂದೇ ಬೈಕ್‌ನಲ್ಲಿ ಐವರು ಪ್ರಯಾಣಿಸುತ್ತಿದ್ದ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ವೇದವ್ಯಾಸ್ ಕಾಮತ್ ವಿಡಿಯೋ ಹಂಚಿಕೊಂಡಿದ್ದು,ಡಿಸಿಪಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ಪೋಸ್ಟ್ ನಲ್ಲಿ,’ಇದು ಅಪಾಯಕಾರಿ! ಇದನ್ನು ನೋಡಲೂ ಭಯವಾಗುತ್ತದೆ, ಮಕ್ಕಳ ಪ್ರಾಣವನ್ನೂ ಅಪಾಯಕ್ಕೆ ಸಿಲುಕಿಸಲಾಗಿದೆ. ಐದು ಮಂದಿ ಕುಳಿತಿರುವುದು ಕಾನೂನಿಗೆ ವಿರುದ್ಧವಾಗಿದೆ ಮತ್ತು ಜೀವಕ್ಕೆ ಅಪಾಯವಾಗಿದೆ. ನಡುವೆ ಒಂದು ಮಗು ಮಲಗಿದೆ. ಇಂತಹ ಅಪಾಯಕಾರಿ ಪ್ರಯಾಣದ ಬಗ್ಗೆ
ಯಾರಾದರೂ ಹೇಗೆ ಯೋಚಿಸಬಹುದು’ಎಂದು ಬರೆದಿದ್ದಾರೆ.
ಅಲ್ಲದೆ ಪ್ರಯಾಣದ ಮೂಲಭೂತ ಪ್ರಜ್ಞೆಯು ಅತ್ಯಗತ್ಯವಾಗಿರುತ್ತದೆ. ಈ ವಿಚಾರದಲ್ಲಿ ಡಿಸಿಪಿ ಅಪರಾಧ ಮತ್ತು ಸಂಚಾರ ಮಂಗಳೂರು ನಗರ ಪೊಲೀಸರು ಮಧ್ಯಪ್ರವೇಶಿಸಬೇಕು. ಇಂತಹ ಅಪಾಯಕಾರಿ ಸವಾರಿಗಾಗಿ ಪರವಾನಗಿ ಹೊಂದಿರುವವರನ್ನು ಬುಕ್ ಮಾಡಿ ಕಟ್ಟುನಿಟ್ಟಿನ ಕ್ರಮಕ್ಕೆ ನಾನು ಒತ್ತಾಯಿಸುತ್ತೇನೆ ಮತ್ತು ಇಲಾಖೆಯು ನಗರದಲ್ಲಿ ಕಾಲಕಾಲಕ್ಕೆ ಈ ರೀತಿ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೀವನ ಅಮೂಲ್ಯವಾಗಿದೆ, ಕಾಳಜಿ ವಹಿಸಿ, “ಎಂದು ಟ್ವಿಟರ್ ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.
ಶಾಸಕರ ವಿಡಿಯೋ ಶೇರ್ ಮಾಡಿದ ಬೆನ್ನಲ್ಲೇ, ನೆಟ್ಟಿಗರಿಂದ ಕಾಮೆಂಟ್ಸ್ ಬಂದಿದ್ದು,ಪೆಟ್ರೋಲ್ ರೇಟ್ ಜಾಸ್ತಿಯಾಗಿದೆ ಅದಕ್ಕೆ ಒಂದೇ ಬೈಕ್ ನಲ್ಲಿ ಹೋಗುತ್ತಿದ್ದಾರೆ ಎಂದು ಒಬ್ಬರು ಹೇಳಿದ್ದಾರೆ.