ಭಾನುವಾರದಂದು ಅಪ್ಪಳಿಸಲಿದೆ ಸೈಕ್ಲೋನ್..? ಕರ್ನಾಟಕದಲ್ಲಿ ಭಾರೀ ಮಳೆ ಸಾಧ್ಯತೆ |ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ!
ನಿರೀಕ್ಷಿಸಿದಂತೆ ಅಂಡಮಾನ್ ಸಮುದ್ರ ಪ್ರದೇಶದಲ್ಲಿ ಚಂಡಮಾರುತ ನಿರ್ಮಾಣವಾಗಿದ್ದು ನಿಕೋಬಾರ್ ದ್ವೀಪಗಳಲ್ಲಿ ಈಗಾಗಲೇ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇದರ ಪರಿಣಾಮದಿಂದ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ ನಾಲೈದು ದಿನ ಇನ್ನಷ್ಟು ಚುರುಕಾಗಲಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಭಾನುವಾರ (ಮೇ 8) ಮಧ್ಯಾಹ್ನ ವೇಳೆಗೆ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ.
ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ವಾಯುಭಾರ
ಕುಸಿತ ಒಂದೆರೆಡು ದಿನಗಳಲ್ಲಿ ಚಂಡಮಾರುತವಾಗಿ
ಸೃಷ್ಟಿಯಾಗಲಿದ್ದು, ಓರಿಸ್ಸಾದತ್ತ ಮಾರುತಗಳು ಚಲಿಸಲಿವೆ. ಹವಾಮಾನ ಇಲಾಖೆ ಸೈಕ್ಲೋನ್‌ಗೆ ಇನ್ನೂ ಹೆಸರು ಕೊಟ್ಟಿಲ್ಲ. ಇದರಿಂದ ನಮ್ಮ ರಾಜ್ಯಕ್ಕೆ ಅಷ್ಟೇನೂ ಪರಿಣಾಮ ಇಲ್ಲದಿದ್ದರೂ ಭರ್ಜರಿ ಮಳೆಯಾಗಲಿದೆ ಎಂ ದು ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಹೇಳಿದ್ದಾರೆ.
ಬೆಂಗಳೂರು, ಬೆಂ. ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮಂಡ್ಯ, ಮೈಸೂರು, ಚಿತ್ರದುರ್ಗ, ಬಳ್ಳಾರಿ ಹಾಗೂ ದಾವಣಗೆರೆಯಲ್ಲಿ ಮುಂದಿನ 4 ದಿನ ಗುಡುಗು ಮಿಂಚು ಸಹಿತ ಭಾರಿ ಮಳೆ ಬೀಳಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲೂ ಧಾರಾಕಾರವಾಗಿ ಮಳೆ ಬೀಳಲಿದೆ.
ಒಡಿಶಾದ 18 ಜಿಲ್ಲೆಗಳಲ್ಲಿ ಈಗಾಗಲೇ ಹೈ ಅಲರ್ಟ್ ಘೋಷಿಲಾಗಿದೆ. ಬಂಗಾಳ ಕೊಲ್ಲಿಯ ಕಡಲ ತೀರದಲ್ಲಿ ಮುಂದಿನ 5 ದಿನ ಯಾರೂ ಕೂಡ ಸಮುದ್ರಕ್ಕಿಳಿಯಬಾರದು. ಮೀನುಗಾರಿಕೆಗೆ ಹೋಗಬಾರದು ಎಂದು ಎಚ್ಚರಿಕೆ ಕೊಡಲಾಗಿದೆ.