ಮತ್ತೆ “ಬಾಟಲ್” ಕೈಗೆತ್ತಿಕೊಂಡ್ರು ಯೋಗರಾಜ್ ಭಟ್ರು !! | ‘ಎಣ್ಣೆ ಸಾಂಗ್’ ಮೂಲಕ ಮದ್ಯ ಪ್ರಿಯರಿಗೆ ನಶೆಯೇರಿಸಿ ಕುಣ್ಸೇಬಿಟ್ರು

ಯೋಗರಾಜ್ ಭಟ್ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ. “ಮುಂಗಾರುಮಳೆ” ಸೂಪರ್ ಹಿಟ್ ಆದ ನಂತರ ಅವರಿಗೆ ಚಿತ್ರರಂಗದಲ್ಲಿ ಸಾಲು ಸಾಲು ಅವಕಾಶಗಳು ದಕ್ಕಿದವು ಎಂದೇ ಹೇಳಬಹುದು. ಇದೀಗ ನಿರ್ದೇಶನದ ಜೊತೆಗೆ ಸಾಹಿತಿಯಾಗಿಯೂ ಹೆಸರು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಒಂದರ ಮೇಲೊಂದು ಎಣ್ಣೆ ಸಾಂಗ್ ಬರೆಯುತ್ತಿದ್ದು, ಭಟ್ರು ‘ಎಣ್ಣೆ ಸಾಂಗ್’ ಪಿತಾಮಹಾ ಆಗುವತ್ತ ದಾಪುಗಾಲು ಇಡುತ್ತಿದ್ದಾರೆ.

ಈಗಾಗಲೇ ‘ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು’ ಹಾಡು ಕುಡಿಯುವವರಿಗೆ ಹಾಗೂ ಕುಡಿಯದವರಿಗೆ ಇಬ್ಬರಿಗೂ ಮೆಚ್ಚುಗೆಯಾಗಿತ್ತು. ಅಂದು ಖಾಲಿ ಬಾಟಲು ಮೇಲೆ ಕೆಳಗೆ ಮಾಡಿ ಶರಣ್ ಪ್ರೇಕ್ಷಕರನ್ನು ರಂಜಿಸಿದ್ದರು. ಇದೀಗ “ಗಿರ್ಕಿ” ಚಿತ್ರಕ್ಕಾಗಿ ಮತ್ತೊಮ್ಮೆ ಬಾಟಲು ಗ್ಲಾಸು ಕೈಗೆತ್ತಿಕೊಂಡಿದ್ದಾರೆ ಭಟ್ರು. “ಗ್ಲಾಸು ಗ್ಲಾಸಿಗೆ ತಾಗೊ ಟೈಮಲಿ ದೇಶ ಚಿಂತನೆ ಮಾಡೋಣ” ಎಂಬ ಹಾಡನ್ನು ಬರೆದಿದ್ದಾರೆ. ಎಣ್ಣೆ ಸೇರದವರಿಗೂ, ಈ ಹಾಡಿನ ಮತ್ತು ಸಣ್ಣಗೆ ಗಿರಕಿ ಹೊಡೆಯಲು ಆರಂಭ ಆಗಿದೆ. ಸದಾ ಜನರಿಂದ ತುಂಬಿ ತುಳುಕುವ ಬಾರಿನ ‘ ಏಕಾಂತ’ ಪರಿಸರದಲ್ಲಿ ಹೊಸ ಹಾಡಿಗಾಗಿ ತದಕಾಡುತ್ತಿದ್ದ ಬೀರ್ ಬಲ್ಲರು ಫುಲ್ ಖುಷ್. “ಗಿರ್ಕಿ” ಚಿತ್ರದ ಈ ಹಾಡಿಗೆ ಗಾಯಕ ವಿಜಯ್ ಪ್ರಕಾಶ್ ಧ್ವನಿಗೂಡಿಸಿದ್ದಾರೆ.


Ad Widget

Ad Widget

Ad Widget

ಇತ್ತೀಚೆಗೆ ಈ ಹಾಡನ್ನು ದುನಿಯಾ ವಿಜಯ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. A2 ಮ್ಯೂಸಿಕ್ ಸಂಸ್ಥೆ ಈ ಹಾಡನ್ನು ಹೊರತಂದಿದೆ.  ಬಿಡುಗಡೆಯಾದ ಸ್ವಲ್ಪ ಹೊತ್ತಿನಲ್ಲೇ ಈ ಹಾಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಎಣ್ಣೆ ಪ್ರಿಯರಿಗೆ ಮತ್ತೊಂದು ಒಳ್ಳೆಯ ಹಾಡು ಸಿಕ್ಕಿದೆ.

ಎದಿತ್ ಫಿಲಂ ಫ್ಯಾಕ್ಟರಿ ಮತ್ತು ವಾಸುಕಿ ಮೂವೀಸ್ ಸಹಯೋಗದೊಂದಿಗೆ ತರಂಗ ವಿಶ್ವ ನಿರ್ಮಿಸಿರುವ “ಗಿರ್ಕಿ” ಚಿತ್ರವನ್ನು  ಯೋಗರಾಜ್ ಭಟ್ ಅವರ ಶಿಷ್ಯ ವೀರೇಶ್ ಪಿ.ಎಂ ನಿರ್ದೇಶಿಸಿದ್ದಾರೆ‌. ಲವ್, ಥ್ರಿಲ್ಲರ್  ಹಾಗೂ ಕಾಮಿಡಿ  ಆಕ್ಷನ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ವಾಸುಕಿ ಭುವನ್ ಅವರ ಸಹ ನಿರ್ಮಾಣವಿರುವ ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ‌. ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ವೀರೇಶ್.ಪಿ.ಎಂ ಹಾಡುಗಳನ್ನು ಬರೆದಿದ್ದಾರೆ. ನವೀನ್ ಕುಮಾರ್ ಛಲ್ಲ ಛಾಯಾಗ್ರಹಣ, ಮಧು ತುಂಬಕೆರೆ ಅವರ ಸಂಕಲನವಿರುವ ಈ ಚಿತ್ರಕ್ಕೆ ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಹಾಗೂ ರಾಮು, ಮೋಹನ್ ಅವರ ನೃತ್ಯ ನಿರ್ದೇಶನವಿದೆ. ತಮ್ಮ ಕಾಮಿಡಿ ಮೂಲಕ ಮನೆಮಾತಾಗಿರುವ ತರಂಗ ವಿಶ್ವ ಹಾಗೂ ವಿಲೋಕ್ ರಾಜ್ ನಾಯಕರಾಗಿ ನಟಿಸಿದ್ದು, ದಿವ್ಯ ಉರುಡುಗ ಹಾಗೂ ರಾಶಿ ಮಹದೇವ್ ನಾಯಕಿಯರಾಗಿ ನಟಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: