ಮತ್ತೆ ವಕ್ಕರಿಸಿದ ಮಂಗನ ಕಾಯಿಲೆ, ಗ್ರಾಮ ಪಂಚಾಯತ್ ಸದಸ್ಯ ಬಲಿ

ಮಾರಕ ಮಂಗನ ಕಾಯಿಲೆಗೆ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಬಲಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ.

 

ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯತ್ ಸದಸ್ಯ ಕರುಮನೆ ರಾಮಸ್ವಾಮಿ(57) ಮೃತರು.

ಇತ್ತೀಚಿಗೆ ಇವರಲ್ಲಿ ಮಂಗನ ಕಾಯಿಲೆ ಲಕ್ಷಣ ಕಾಣಿಸಿಕೊಂಡಿತ್ತು. ರಕ್ತ ಪರೀಕ್ಷೆ ಮಾಡಿಸಿದಾಗ ಸೋಂಕು ದೃಢಪಟ್ಟಿತ್ತು. ತಕ್ಷಣ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸೋಮವಾರ ಜ್ವರ ಉಲ್ಬಣಗೊಂಡಿದ್ದು, ಅಂಗಾಂಗ ವೈಫಲ್ಯವಾಗಿ ಮಂಗಳವಾರ ಮೃತಪಟ್ಟಿದ್ದಾರೆ ಎಂದು ಸಾಗರ ವೈದ್ಯಾಧಿಕಾರಿ ಡಾ. ಮೋಹನ್ ತಿಳಿಸಿದ್ದಾರೆ.

ಈ ವರ್ಷ ಜಿಲ್ಲೆಯಲ್ಲಿ ಕೆಎಫ್‌ಡಿಗೆ ಇದು ಮೊದಲನೆಯ ಸಾವು. ಮಳೆಯಾದರೆ ಹುಣುಗು ಕೊಚ್ಚಿಕೊಂಡು ಹೋಗಲಿದ್ದು, ಸೋಂಕು ಹರಡುವುದಿಲ್ಲ. ತೀರ್ಥಹಳ್ಳಿ ತಾಲೂಕು ಸೇರಿದಂತೆ ಹಲವೆಡೆ ಈಗಾಗಲೇ ಮಳೆಯಾಗಿದ್ದು, ಇತರ ಕಡೆಗಳಲ್ಲಿ ಕೆಎಫ್‌ಡಿ ಸೋಂಕು ಕಾಣಿಸಿಕೊಂಡಿಲ್ಲ. ಅರಳಗೋಡು ಭಾಗದಲ್ಲಿ ಇನ್ನೂ ಮಳೆಯಾಗದಿರುವುದರಿಂದ ಹುಣುಗು ಸಮಸ್ಯೆ ಇದೆ ಎಂದು ಹೇಳಲಾಗುತ್ತಿದೆ.

2019ರಲ್ಲಿ ಶಿವಮೊಗ್ಗ ಜಿಲ್ಲೆಯ ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗನಕಾಯಿಲೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, 20ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.

Leave A Reply

Your email address will not be published.