ಸರ್ಕ್ಯೂಟ್ ಹೌಸ್ ನಲ್ಲಿ ತಂಗಿದ್ದ ಸಚಿವರಿಗೆ ಕಚ್ಚಿದ ಇಲಿ !! | ಅಸ್ವಸ್ಥಗೊಂಡ ಮಿನಿಸ್ಟರ್ ಆಸ್ಪತ್ರೆಗೆ ದಾಖಲು

Share the Article

ಸರ್ಕೀಟ್ ಹೌಸ್‌ನಲ್ಲಿ ತಂಗಿದ್ದ ಸಚಿವರಿಗೆ ಇಲಿ ಕಚ್ಚಿದ್ದರಿಂದ ಅಸ್ವಸ್ಥಗೊಂಡ ಅವರು ಆಸ್ಪತ್ರೆಗೆ ದಾಖಲಾದ ಅಚ್ಚರಿಯ ಘಟನೆಯೊಂದು ಉತ್ತರಪ್ರದೇಶದ ಬಾಂದಾ ಜಿಲ್ಲೆಗೆ ನಿನ್ನೆ ಭೇಟಿ ನೀಡಿದ್ದ ವೇಳೆ ಬೆಳಕಿಗೆ ಬಂದಿದೆ.

ಯುವಜನ ಅಭಿವೃದ್ಧಿ ಮತ್ತು ಕ್ರೀಡಾ ಸಚಿವ ಗಿರೀಶ್‌ಚಂದ್ರ ಯಾದವ್ ಅವರು ಬಾಂದಾ ಜಿಲ್ಲೆಗೆ ತೆರಳಿದ್ದರು. ರಾತ್ರಿ ಮಾವೈ ಬೈಪಾಸ್‌ನಲ್ಲಿರುವ ಒಂದು ಸರ್ಕಿಟ್ ಹೌಸ್‌ನಲ್ಲಿ ಉಳಿದುಕೊಂಡಿದ್ದರು. ರಾತ್ರಿ ಮಲಗಿದ್ದ ವೇಳೆ ಅವರಿಗೆ ಇಲಿ ಕಚ್ಚಿದೆ. ಸ್ವಲ್ಪ ಸಮಯ ಕಳೆದ ಬಳಿಕ ಅವರು ಕೊಂಚ ಅಸ್ವಸ್ಥರಾಗಿದ್ದರು ಎನ್ನಲಾಗಿದೆ.

ಇದು ಅಲ್ಲಿನ ಸಿಬ್ಬಂದಿಯ ಗಮನಕ್ಕೆ ಬಂದಿದ್ದು, ಕೂಡಲೇ ಅವರನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಬಳಿಕ, ಡಿಸ್ಚಾರ್ಜ್ ಮಾಡಲಾಗಿದೆ. ಸದ್ಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ.

ಸಚಿವರ ಬಲಗೈ ಬೆರಳಿಗೆ ಏನೋ ಕಚ್ಚಿರುವ ಗುರುತು ಪತ್ತೆಯಾಗಿದ್ದು, ಹಾವು, ಚೇಳು ಕಚ್ಚಿದೆ ಎಂದು ಗಾಬರಿಗೊಂಡಿದ್ದರು. ಸ್ಥಳ ಪರಿಶೀಲನೆ ಮಾಡಿದಾಗ ಇಲಿ ಇದ್ದಿದ್ದು ಕಂಡುಬಂದಿದೆ. ಸೋಮವಾರ ಮುಂಜಾನೆ 3 ಗಂಟೆಯಲ್ಲಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಚಿಕಿತ್ಸೆ ನೀಡಲಾಗಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ (ಸಿಎಂಎಸ್) ಡಾ.ಎಸ್.ಎನ್.ಮಿಶ್ರಾ ತಿಳಿಸಿದ್ದಾರೆ.

Leave A Reply

Your email address will not be published.