ವೈದ್ಯಕೀಯ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ‘ಚರಕ ಶಪಥ’ ಪ್ರಮಾಣ ವಚನ ನೀಡಿದ್ದಕ್ಕೆ ಕಾಲೇಜು ಮುಖ್ಯಸ್ಥನ ವಜಾ !! | ಭಾಷೆಯ ವಿಚಾರದಲ್ಲಿ ಮತ್ತೆ ವಿವಾದಕ್ಕೆ ನಾಂದಿ ಹಾಡಿದ ಸರ್ಕಾರ

ದೇಶದಲ್ಲಿ ಪದೇ ಪದೇ ಭಾಷೆ ಕುರಿತಾದ ವಿವಾದಗಳು ಸೃಷ್ಟಿಯಾಗುತ್ತಲೇ ಇವೆ. ಅಂತೆಯೇ ಇದೀಗ ಕಾಲೇಜಿನ ನೂತನ ವಿದ್ಯಾರ್ಥಿಗಳಿಗೆ ಸಂಸ್ಕೃತದಲ್ಲಿ ಮಹರ್ಷಿ ʻಚರಕ ಶಪಥʼ ಪ್ರಮಾಣ ವಚನ ನೀಡಿದ್ದಕ್ಕೆ ವೈದ್ಯಕೀಯ ಕಾಲೇಜಿನ ಡೀನ್‌ರನ್ನು ತಮಿಳುನಾಡು ಸರ್ಕಾರ ವಜಾಗೊಳಿಸಿದ ಘಟನೆ ನಡೆದಿದೆ.

ಹಿಂದಿ ಹೇರಿಕೆ ವಿವಾದ, ಕೇಂದ್ರದೊಂದಿಗಿನ ರಾಜ್ಯ ಸರ್ಕಾರದ ಉದ್ವಿಗ್ನತೆ ನಡುವೆ ಈ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಹಣಕಾಸು ಸಚಿವ ಪಳನಿವೇಲ್‌ ತ್ಯಾಗ ರಾಜನ್‌ ಮತ್ತು ವಾಣಿಜ್ಯ ತೆರಿಗೆ ಸಚಿವ ಪಿ.ಮೂರ್ತಿ ಭಾಗವಹಿಸಿದ್ದು ವಿವಾದಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ದೃಶ್ಯಗಳಿರುವ ವೀಡಿಯೋ ವೈರಲ್‌ ಆಗಿತ್ತು. ಪರಿಣಾಮವಾಗಿ ಡೀನ್ ಎ.ರತ್ನವೇಲ್ ಅವರನ್ನು ಪದಚ್ಯುತಗೊಳಿಸುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಬೇಕು ಎಂದು ಸರ್ಕಾರ ಆದೇಶಿಸಿದೆ. ಕಾಲೇಜಿನ ನಿಯಮ ಹಾಗೂ ಆಚರಣೆಗಳನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಮಾ.ಸುಬ್ರಮಣಿಯನ್‌ ತಿಳಿಸಿದ್ದಾರೆ.

ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಇತ್ತೀಚೆಗೆ, ವೈದ್ಯಕೀಯ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ʼಹಿಪೊಕ್ರೆಟಿಕ್ ಪ್ರಮಾಣʼಕ್ಕೆ ಬದಲಾಗಿ ‘ಚರಕ ಶಪಥ’ವನ್ನು ನೀಡುವಂತೆ ಸೂಚಿಸಿತ್ತು. ಬಿಜೆಪಿ ನೇತೃತ್ವದ ಸರ್ಕಾರದ ಹಿಂದುತ್ವದ ಅಜೆಂಡಾದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಕ್ಷೇಪಗಳು ಸಹ ವ್ಯಕ್ತವಾಗಿದ್ದವು.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು, ಚರಕ ಶಪಥ ಐಚ್ಛಿಕವಾದದ್ದು. ʻಚರಕ ಶಪಥʼ ಪ್ರಮಾಣ ವಚನಕ್ಕೆ ವೈದ್ಯಕೀಯ ವಿದ್ಯಾರ್ಥಿಗಳನ್ನು ಬಲವಂತಪಡಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಚರಕ ಶಪಥವು ಪುರಾತನ ವೈದ್ಯಕೀಯ ಪದ್ಧತಿಗಳ ಆಯುರ್ವೇದ ಗ್ರಂಥಗಳಲ್ಲಿ ಒಂದಾದ ‘ಚರಕ ಸಂಹಿತಾ’ದಿಂದ ಬಂದಿದೆ. ಹಿಪೊಕ್ರೆಟಿಕ್ ಪ್ರಮಾಣವು ಗ್ರೀಕ್ ವೈದ್ಯಕೀಯ ಪಠ್ಯದ ಮೂಲದ್ದಾಗಿದೆ.

Leave A Reply

Your email address will not be published.