ವಿಟ್ಲ : ನೀರಿನ ಟ್ಯಾಂಕಿನೊಳಗೆ ಜಾರಿಬಿದ್ದ ಕಾಡುಕೋಣ!
ಬಾಯಾರಿಕೊಂಡು ಬಂದ ಕಾಡುಕೋಣವೊಂದು ನಾಡಿಗೆ ಬಂದು, ದಾಹ ತೀರಿಸಲೆಂದು ಅತ್ತಿಂದಿತ್ತ ತಿರುಗುತ್ತಿರುವಾಗ ನೀರು ತುಂಬಿದ ಟ್ಯಾಂಕೊಂದನ್ನು ಕಂಡಿದೆ. ದಾಹದಿಂದ ಸೋತುಹೋಗಿದ್ದ ಕಾಡುಕೋಣ ಕೂಡಲೇ ಆ ಟ್ಯಾಂಕ್ ಮೇಲೇರಿ ಬಗ್ಗಿ ನೀರು ಕುಡಿಯಲು ಹರಸಾಹಸ ಪಡುತ್ತಿರುವಾಗಲೇ ಜಾರಿ ನೀರಿನ ಟ್ಯಾಂಕೊಳಗೆ ದೊಪ್ಪನೆ ಬಿದ್ದುಬಿಟ್ಟಿದೆ.
ಹೌದು, ಈ ಘಟನೆ ನಡೆದಿರುವುದು ವಿಟ್ಲ, ಕನ್ಯಾನದಲ್ಲಿ.
ಕಳೆಂಜೆಮಲೆ ರಕ್ಷಿತಾರಣ್ಯ ಕಾಡಿನಿಂದ ಕಾಡುಕೋಣ ನೀರು ಹುಡುಕಿಕೊಂಡ ಕನ್ಯಾನ ಭಾರತ ಸೇವಾಶ್ರಮದ ನೀರಿನ ಟ್ಯಾಂಕ್ ನಲ್ಲಿ ನೀರು ಕುಡಿಯಲು ಯತ್ನಿಸಿದಾಗ ಕೋಣ ಟ್ಯಾಂಕ್ ಗೆ ಜಾರಿ ಬಿದ್ದಿದೆ. ಟ್ಯಾಂಕ್ ಆಳವಾಗಿದ್ದ ಕಾರಣ ಇದರಿಂದ ಮೇಲೆ ಬರಲಾಗದೆ ಟ್ಯಾಂಕ್ ಒಳಗಡೆ ಕೋಣ ಬಾಕಿಯಾಗಿದೆ. ಈ ಘಟನೆ ಮಧ್ಯರಾತ್ರಿ ಸಂಭವಿಸಿದ್ದು ಬೆಳಿಗ್ಗೆವರೆಗೆ ಕೋಣ ಆ ಟ್ಯಾಂಕ್ ನೀರಿನಲ್ಲೇ ಸ್ವಿಮ್ಮಿಂಗ್ ಮಾಡ್ತಾ ಕಾಲ ಕಳೆದಿದೆ. ಮುಂಜಾನೆ ಆಶ್ರಮ ನಿವಾಸಿಗಳು ನೋಡಿದಾಗಲೇ ಎಲ್ಲರಿಗೂ ಈ ವಿಷಯ ಬೆಳಕಿಗೆ ಬಂದಿದೆ.
ಕೂಡಲೇ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಟ್ಯಾಂಕ್ ನಿಂದ ನೀರು ಖಾಲಿ ಮಾಡಲಾಗುತ್ತಿದ್ದು, ಅದರ ಮೂಲಕ ಕೋಣವನ್ನು ರಕ್ಷಿಸಲಾಗುತ್ತದೆ. ಬ್ಯಾಂಕ್ 5 ಅಡಿ ಆಳವಿದ್ದು, ಕೋಣಕ್ಕೆ ಯಾವುದೇ ಗಾಯಗಳಾಗಿಲ್ಲ ಎಂದು ಅರಣ್ಯ ಸಿಬ್ಬಂದಿಗಳು ತಿಳಿಸಿದ್ದಾರೆ.