ರಂಜಾನ್ ಹಬ್ಬದ ಆಚರಣೆಗೆ ಹಲವು ರೀತಿಯ ನಿರ್ಬಂಧ ವಿಧಿಸಿದ ಸರ್ಕಾರ !!
ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಅನ್ನು ಶಾಂತಿಯುತವಾಗಿ ಆಚರಿಸಲು ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದೆ.
ಇತ್ತೀಚೆಗೆ ಹನುಮ ಜಯಂತಿ ಉತ್ಸವದ ಸಂದರ್ಭದಲ್ಲಿ ನಡೆದಿರುವ ಯಾವುದೇ ಹಿಂಸಾಚಾರ ಅಥವಾ ಉದ್ವಿಗ್ನ ಘಟನೆಗಳು ಮತ್ತೆ ಮರುಕಳಿಸದಂತೆ ಆಯಾ ರಾಜ್ಯ ಸರ್ಕಾರಗಳು ಮನವಿ ಮಾಡಿವೆ. ಇದಕ್ಕಾಗಿ ಶಾಂತಿಯುತವಾಗಿ ರಂಜಾನ್ ಆಚರಣೆ ಮಾಡಲು ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
ಮಧ್ಯಪ್ರದೇಶದ ಖಾರ್ಗೋನ್ನಲ್ಲಿ ಈದ್-ಉಲ್-ಫ್ರಿತ್ ಮತ್ತು ಅಕ್ಷಯ ತೃತೀಯ ಆಚರಣೆ ಸಂದರ್ಭದಲ್ಲಿ 24 ಗಂಟೆಗಳ ಕರ್ಫ್ಯೂ ವಿಧಿಸಲಾಗಿದೆ. ಕಳೆದ ಏಪ್ರಿಲ್ 10 ರಂದು ರಾಮನವಮಿ ಮೆರವಣಿಗೆಯಲ್ಲಿ ಇದೇ ಪ್ರದೇಶದಲ್ಲಿ ಹಿಂಸಾಚಾರ ವರದಿಯಾಗಿತ್ತು. ಹಾಗಾಗಿ ಖಾರ್ಗೋವ್ನಲ್ಲಿ ಮುಂಬರುವ ರಂಜಾನ್, ಅಕ್ಷಯ ತೃತೀಯ ಹಬ್ಬಗಳನ್ನು ಮನೆಗಳಲ್ಲೇ ಆಚರಿಸುವಂತೆ ಮೇ 2, 3ರಂದು ಕರ್ಫ್ಯೂ ವಿಧಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಅನುಮತಿ ಪಡೆಯದ 46 ಸಾವಿರ ಧ್ವನಿವರ್ಧಕಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಉಳಿದ 59 ಸಾವಿರ ಧ್ವನಿ ವರ್ಧಕಗಳು ಶಬ್ಧ ಮಿತಿಯ ಅನುಮತಿ ಪಡೆದು ಆಜಾನ್ಗೆ ಬಳಕೆ ಮಾಡಲಾಗುತ್ತಿದೆ. ಆದರೆ ಉತ್ತರ ಪ್ರದೇಶದ ಮೀರತ್ನಲ್ಲಿ ಮಾತ್ರ ಈದ್ ಉಲ್ ಫ್ರಿತ್ ವೇಳೆ ಜಾಗರಣೆ ನಡೆಸದಂತೆ ಎಚ್ಚರಿಕೆ ನೀಡಿದೆ. ಕೆಲವು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಜಾಗರಣೆ ಆಚರಿಸುವುದನ್ನು ನಿಷೇಧಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಹಾರಾಷ್ಟ್ರದಲ್ಲಿನ 5 ಮಸೀದಿಗಳಿಗೂ ಡಿಜೆ ಸಾಂಗ್ಗಳು ಸದ್ದು ಮಾಡದಂತೆ ಸರ್ಕಾರ ಸೂಚನೆ ನೀಡಿದೆ. ಕೆಲ ಹಿರಿಯ ಮುಸ್ಲಿಂ ಮುಖಂಡರು ಡಿಜೆ ಹಾಕಲು ನಿರ್ಧರಿಸಿದ್ದ ಕಾರಣದಿಂದಾಗಿ ಈ ಆದೇಶ ಹೊರಡಿಸಿದ್ದು, ಡಿಜೆಗೆ ವಿನಿಯೋಗಿಸುವ ಹಣವನ್ನು ಬಡವರಿಗೆ, ಅವಶ್ಯಕತೆ ಉಳ್ಳವರಿಗೆ ನೀಡುವಂತೆ ಸರ್ಕಾರ ಸಲಹೆ ನೀಡಿದೆ. ಹಾಗೆಯೇ ಜಮ್ಮು ಮತ್ತು ಕಾಶ್ಮೀರದ ಜಾಮಿಯಾ ಮಸೀದಿಯಲ್ಲಿ ಬೆಳಿಗ್ಗೆ 7 ಗಂಟೆಗೆಲ್ಲಾ ಈದ್ ನಮಾಜ್ ಮುಕ್ತಾಯಗೊಳಿಸುವಂತೆ ಸೂಚನೆ ನೀಡಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.