ಮಗುವಿಗೆ ಶಿಸ್ತು ರೂಢಿಸಲು ವೇಳಾಪಟ್ಟಿ ಒಪ್ಪಂದ ಮಾಡಿಕೊಂಡ ತಂದೆ | ಪ್ರತಿದಿನ 10 ರೂ, ಅಳದೆ ಹೋಂವರ್ಕ್ ಮಾಡಿದರೆ 100 ರೂ. ಬೋನಸ್ ಅಂತೆ !!
ಬಹಳಷ್ಟು ಪೋಷಕರು ತಮ್ಮ ಮಕ್ಕಳು ಓದಿನ ವಿಷಯದಲ್ಲಿ ಒಳ್ಳೆಯ ರ‍್ಯಾಂಕ್ ಪಡೆದುಕೊಳ್ಳಬೇಕು ಎಂದು ಬಯಸುತ್ತಾರೆ. ಅದೇ ಕಾರಣಕ್ಕೆ ಅನೇಕ ಶಿಸ್ತುಬದ್ಧ ನಿಯಮಗಳನ್ನು ವಿಧಿಸುತ್ತಾರೆ. ಆದರೆ, ಇಲ್ಲೊಬ್ಬ ತಂದೆ ತನ್ನ 6 ವರ್ಷದ ಮಗುವಿನೊಂದಿಗೆ ವೇಳಾಪಟ್ಟಿ ಒಪ್ಪಂದ ಮಾಡಿಕೊಳ್ಳುವ ಮೂಲಕ ತಮ್ಮ ಮಗನಿಗೆ ಶಿಸ್ತು ರೂಢಿಸಲು ಮುಂದಾಗಿದ್ದಾರೆ.
ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಮ್ಮ 6 ವರ್ಷದ ಮಗನಿಗೆ ವೇಳಾಪಟ್ಟಿ ರಚಿಸಿ ಅದನ್ನು ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಮಗ ಅಬೀರ್ ಅವರೊಂದಿಗೆ ಸಹಿ ಮಾಡಿದ ಕೈಬರಹದ ವೇಳಾಪಟ್ಟಿ ಒಪ್ಪಂದದ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
ಈ ಒಪ್ಪಂದವು ಮಗು ದಿನನಿತ್ಯದ ಚಟುವಟಿಕೆಗಳನ್ನು ಒಳಗೊಂಡಿದೆ. ಬೆಳಿಗ್ಗೆ ಎದ್ದು ಶುಚಿಯಾಗುವುದು, ಹಾಲು ಕುಡಿಯುವುದು ಮತ್ತು ಹೋಂ ವರ್ಕ್ ಮಾಡುವುದು, ಅಳದೇ, ಕೂಗಾಡದೇ, ಗೊಣಗದೇ ಅಥವಾ ಜಗಳವಾಡದೆ ತನ್ನ ಕೆಲಸಗಳನ್ನು ಪೂರ್ಣಗೊಳಿಸಬೇಕು. ಹೀಗೆ ಮಾಡಿದರೆ, ತಂದೆ ಮಗನಿಗೆ ಪ್ರತಿದಿನ 10 ರೂ. ನೀಡುವುದಾಗಿ ಪಟ್ಟಿಯಲ್ಲಿ ಬರೆದಿದ್ದಾರೆ. ಅಲ್ಲದೆ, ಮಗು ಒಂದು ವಾರ ಪೂರ್ತಿ ಒಳ್ಳೆಯ ನಡತೆಯೊಂದಿಗೆ ಮುಂದುವರಿದರೆ, ಅವನಿಗೆ ಬೋನಸ್ ಆಗಿ 100 ರೂ. ಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ.
ಇದೀಗ ಜಾಲತಾಣದಲ್ಲಿ ಈ ಒಪ್ಪಂದಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ. 32 ಸಾವಿರಕ್ಕೂ ಹೆಚ್ಚು ಮಂದಿ ಇದಕ್ಕೆ ಸ್ಪಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಗುವಿನ ತಂದೆ ನನ್ನ ಮಗು ಸುಮಾರು 2 ಸಾವಿರ ರೂ. ಸಂಪಾದಿಸಿದ್ದಾನೆ. ಶಾಲೆಗಳು ಪ್ರಾರಂಭವಾದ ಬಳಿಕ ವೇಳಾಪಟ್ಟಿ ಬದಲಾಯಿಸಲಾಯಿತು ಎಂದು ಹೇಳಿದ್ದಾರೆ.
ಅವರ ಶಿಸ್ತಿನ ವೇಳಾಪಟ್ಟಿ ಹಲವು ಪೋಷಕರಿಗೆ ಮಾದರಿಯಾಗಿದೆ. ಮಕ್ಕಳನ್ನು ಶಿಸ್ತಿನಿಂದ ನೋಡಿಕೊಳ್ಳಲು ಕಷ್ಟಪಡುವ ಈ ಕಾಲದಲ್ಲಿ ಇಂತಹ ಕೆಲವು ಉಪಾಯಗಳನ್ನು ಪೋಷಕರು ಉಪಯೋಗಿಸಿಕೊಂಡು ತಮ್ಮ ಮಕ್ಕಳಲ್ಲಿ ಶಿಸ್ತು ಅಳವಡಿಸಬೇಕಿದೆ.