ಬಿಸಿಲಿನ ಬೇಗೆಗೆ ಹೈರಾಣಾಗಿರುವ ಜನತೆಗೆ ಮತ್ತೆ ತಂಪೆರೆಯಲಿದ್ದಾನೆ ವರುಣ !! | ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ, ಹವಾಮಾನ ಇಲಾಖೆಯಿಂದ ಎಚ್ಚರಿಕೆ
ಬಿಸಿಲಿನ ಬೇಗೆಯಿಂದ ರಾಜ್ಯದ ಜನರು ಹೈರಾಣಾಗಿ ಹೋಗಿದ್ದಾರೆ. ಈ ನಡುವೆ ರಾಜ್ಯದ ಹಲವು ಕಡೆ ಮಳೆಯಾಗಿದ್ದು, ಮುಂದಿನ ಕೆಲವು ಗಂಟೆಗಳಲ್ಲಿ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಾಯುಭಾರ ಕುಸಿತದಿಂದ ಮುಂದಿನ ದಿನಗಳಲ್ಲಿ ಗಾಳಿ ವೇಗ 30 ರಿಂದ 40 ಕಿ.ಮೀ ವೇಗದಲ್ಲಿರಲಿದ್ದು, ದಕ್ಷಿಣ ಒಳನಾಡಿನಲ್ಲಿ ಮಿಂಚು ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ರಾಜ್ಯಾದ್ಯಂತ ಅಲ್ಲಲ್ಲಿ ಮಿಂಚಿನೊಂದಿಗೆ ಗುಡುಗು ಸಂಭವಿಸುವ ಸಾಧ್ಯತೆ ಕೂಡ ಇದೆ.
ಕೊಡಗು, ಮೈಸೂರು ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ರಾಮನಗರ, ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಬೆಂಗಳೂರು ಹವಾಮಾನ ಇಲಾಖೆ ಸೂಚನೆ ನೀಡಿದೆ. ಇನ್ನು ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದು, ನಿನ್ನೆ ಉತ್ತರ ಭಾಗದಲ್ಲಿ ಮಳೆ ಆರ್ಭಟಕ್ಕೆ ಮೂವರು ಬಲಿಯಾಗಿದ್ದಾರೆ.
ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರ ಮಳೆ, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ವ್ಯಾಪಕವಾಗಿ ಸಾಧರಣ ಮಳೆ, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಹಾಗೂ ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ.
ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಅನೇಕ ಕಡೆ ಮಳೆಯಾಗುವ ಸಾಧ್ಯತೆ ಹೆಚ್ಚಿದ್ದು, ಬಿಸಿಲಿನ ಶಾಖದಿಂದ ಕಂಗೆಟ್ಟಿದ್ದ ಜನತೆಗೆ ಈ ಮಳೆ ತಂಪೆರೆಯಲಿದೆ.