ದೇವಸ್ಥಾನ ರಥೋತ್ಸವ ಸಂದರ್ಭದಲ್ಲಿ ಕುರಾನ್ ಪಠಣ ಮಾಡಿಸಿದರೆ, ಶ್ರೀರಾಮ ಸೇನೆಯಿಂದ ಪ್ರತಿಭಟನೆ!
ಹಾಸನ: ಮುಂದಿನ ವರ್ಷ ಕುರಾನ್ ಪಠಿಸಲು ಅವಕಾಶ ನೀಡಿದರೆ ಪ್ರತಿಭಟನೆ ಮಾಡುತ್ತೇವೆ ಎಂದು ಬೇಲೂರಿನಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಬೇಲೂರು ರಥೋತ್ಸವಕ್ಕೂ ಕುರಾನ್‌ಗೂ ಏನು ಸಂಬಂಧವಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆಯವರಿಗೆ ಎಚ್ಚರಿಕೆ ಕೊಡುತ್ತಿದ್ದೇನೆ… ಮುಂದಿನ ವರ್ಷ ಖುರಾನ್ ಪಠಣ ಮಾಡಲು ಹೋದರೆ ಶ್ರೀರಾಮಸೇನೆಯಿಂದ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಈ ವರ್ಷ ಶ್ರೀರಾಮಸೇನೆ ಸಂಘಟನೆ ಬೇಲೂರಿನಲ್ಲಿ ಇರಲಿಲ್ಲ. ತಾಕತ್ತಿದ್ದರೆ ಮುಂದಿನ ವರ್ಷ ಕುರಾನ್ ಪಠಣ ಮಾಡಿ ನೋಡೋಣ. ಕೂಡಲೇ ಇದನ್ನು ವಾಪಾಸ್ ಪಡೆಯಬೇಕು. ಇಲ್ಲವಾದರೆ ಸಂಘರ್ಷ, ಗಲಾಟೆ, ಗಲಭೆಗಳು ಆಗ್ತವೆ. ಬೆಂಕಿ ಹತ್ತೊಳುತ್ತೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಶ್ರೀರಾಮಸೇನೆ ಬೇಲೂರು ತಾಲ್ಲೂಕು ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಮೋದ್ ಮುತಾಲಿಕ್
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳ ನೂರು ಮೀಟರ್ ಅಂತರದಲ್ಲಿ ಹಿಂದುಯೇತರರ ಅಂಗಡಿಗಳಿಗೆ ಅವಕಾಶ ಕೊಡಬಾರದು ಎಂಬುದಾಗಿ ಕಾನೂನಿದೆ. ಆದರೆ ಬೇಲೂರು ಶ್ರೀಚನ್ನಕೇಶವ ದೇವಾಲಯದ ಮುಂದೆ ಒರ್ವ ಮುಸಲ್ಮಾನನ ಅಂಗಡಿ ಇದೆ. ಆತನಿಗೆ ನೀವು ನೋಟಿಸ್ ನೀಡಿದಿರಾ? ಆತ ಇನ್ನೂ ಅಂಗಡಿ ಖಾಲಿ ಮಾಡಿಲ್ಲ. ಇನ್ನೊಂದು ವಾರದೊಳಗೆ ಆ ಅಂಗಡಿ ಖಾಲಿ ಮಾಡಿಸಬೇಕು. ಇಲ್ಲದಿದ್ದರೆ ಖಾಲಿ ಮಾಡಿಸಲು ನಾನೇ ಬರ್ತಿನಿ. ಆಗ ಗಲಾಟೆ ಆಯ್ತು, ಘರ್ಷಣೆ ಆಯ್ತು ಅಂದರೆ ನಾನು ಕೇಳೊಲ್ಲ. ಮಸೀದಿ ಒಳಗೆ ನಮಗೆ ಪ್ರವೇಶ ಕೊಡ್ತಿರಾ? ಆವರಣದಲ್ಲಿ ವ್ಯಾಪಾರ ಮಾಡಲು ಬಿಡ್ತರಾ? ಶ್ರೀಚನ್ನಕೇಶವ ದೇವಾಲಯದ ಆಡಳಿತಾಧಿಕಾರಿ ಅವರೇ ಕಾನೂನನ್ನು ಪಾಲನೆ ಮಾಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಅಝಾನ್ ವಿಚಾರವಾಗಿ ಕಳೆದ 6 ತಿಂಗಳಿನಿಂದ ಹೋರಾಟ ಮಾಡುತ್ತಿದ್ದೇವೆ. ಮೇ.1 ಡಿಸಿಗಳಿಗೆ ಕೊಟ್ಟಂತಹ ಗಡುವು ಮುಕ್ತಾಯವಾಗುತ್ತದೆ. ಸರ್ಕಾರ ಮೈಕ್‌ಗಳನ್ನು ತೆರವುಗೊಳಿಸದೆ ಇದ್ದರೆ, ಮೇ.9 ರಂದು ಇಡೀ ರಾಜ್ಯಾದ್ಯಂತ ಬೆ.5 ಗಂಟೆಗೆ ಕರ್ನಾಟಕದ ಒಂದು ಸಾವಿರ ದೇವಸ್ಥಾನಗಳಲ್ಲಿ ನಾವು ಸುಪ್ರಭಾತ, ಹನುಮಾನ್ ಚಾಲಿಸ್, ಓಂಕಾರವನ್ನ ಓಂ ನಮಃ ಶಿವಾಯ ನಾಮಸ್ಮರಣೆಯನ್ನು ಪ್ರಾರಂಭ ಮಾಡುತ್ತೇವೆ. ತಾಕತ್ತಿದ್ದರೆ ತಡಿರಿ ನೋಡೋಣ. ಮಸೀದಿ ಮೇಲಿನ ಮೈಕ್ ತೆರವುಗೊಳಿಸಲು ನಿಮಗೆ ತಾಕತ್ತಿಲ್ಲ, ನಮ್ಮ ದೇವಸ್ಥಾನಕ್ಕೆ ಬರ್ತಿರಾ, ಹೇಗೆ ಬರ್ತಿರಾ ಬನ್ನಿ ನೋಡೋಣ. ಮೇ.9 ರಂದು ಬೆ.5 ಗಂಟೆಗೆ ನಮ್ಮ ಪ್ರಾರ್ಥನೆ ಪ್ರಾರಂಭವಾಗುತ್ತಿದ್ದು, ಮೊದಲು ಮಸೀದಿ ಮೈಕ್ ತಡಿರಿ, ಆಮೇಲೆ ನಮ್ಮ ಕಡೆ ಬನ್ನಿ ಎಂದು ಸರ್ಕಾರಕ್ಕೆ ಪೊಲೀಸರಿಗೆ ಸವಾಲ್ ಹಾಕಿದರು.