ಪ್ರವಾಸಿಗರಿಗೆ ಸಿಹಿಸುದ್ದಿ!! ಉಡುಪಿಯ ಸೈಂಟ್ ಮೇರಿಸ್ ದ್ವೀಪದಲ್ಲಿ ಸುರಕ್ಷತೆಗೆ ಒತ್ತು ಕೊಟ್ಟ ಜಿಲ್ಲಾಡಳಿತ!!
ಉಡುಪಿ: ಹಲವು ದುರಂತಗಳಿಗೆ ಸಾಕ್ಷಿಯಾಗಿ, ಒಂದೇ ತಿಂಗಳ ಅಂತರದಲ್ಲಿ ಸೆಲ್ಫಿ ತೆಗೆಯಲು ಹೋದ ಆರು ಜನ ವಿದ್ಯಾರ್ಥಿಗಳು ಮೃತಪಟ್ಟಿದ್ದ ಉಡುಪಿ ಮಲ್ಪೆಯ ಪ್ರವಾಸಿ ತಾಣ ಸೇಂಟ್ ಮೇರಿಸ್ ದ್ವೀಪದಲ್ಲಿ ಸುರಕ್ಷಾ ಕ್ರಮಗಳನ್ನು ಪಾಲಿಸುವ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಸೆಲ್ಫಿ ಟವರ್ ನಿರ್ಮಿಸಲು ಮುಂದಾಗಿದೆ.
ಈ ಬಗ್ಗೆ ಮಲ್ಪೆ ಅಭಿವೃದ್ಧಿ ಸಮಿತಿಯ ಸಭೆ ಕರೆದ ಉಡುಪಿ ಜಿಲ್ಲಾಧಿಕಾರಿ, ದ್ವೀಪದಲ್ಲಾಗುವ ದುರಂತಗಳಿಗೆ ಅಂತ್ಯ ಹಾಡಲು ಕ್ರಮ ಕೈಗೊಳ್ಳುವ ಬಗ್ಗೆ ವಿವರಿಸಿದರು. ಅತೀ ಹೆಚ್ಚು ದುರಂತಗಳಿಗೆ ವಿದ್ಯಾರ್ಥಿಗಳ ಸೆಲ್ಫಿ ಹುಚ್ಚು ಕಾರಣವಾಗಿರುವುದರಿಂದ ದ್ವೀಪದಲ್ಲಿ ಜಿಲ್ಲಾಡಳಿತದ ವತಿಯಿಂದ ಸೆಲ್ಫಿ ಟವರ್, ಸೆಲ್ಫಿ ಪಾಯಿಂಟ್ ನಿರ್ಮಿಸುವ ಯೋಜನೆಯನ್ನು ಕೈಗೊಳ್ಳಲಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಅತೀ ಹೆಚ್ಚು ಪ್ರವಾಸಿಗರು,ಕಾಲೇಜು ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಸುರಕ್ಷಾ ಕ್ರಮಗಳು ಅಗತ್ಯವಾಗಿದೆ. ಅದರಲ್ಲೂ ಸೆಲ್ಫಿ ತೆಗೆಯಲು ಸಹಾಯವಾಗುವಂತಹ ಯೋಜನೆಗೆ ಒತ್ತು ಕೊಟ್ಟ ಜಿಲ್ಲಾಡಳಿತದ ಕ್ರಮಕ್ಕೆ ಯುವ ಪೀಳಿಗೆ ಅಭಿನಂದನೆಯನ್ನು ಸಲ್ಲಿಸುತ್ತಿದೆ.