ಹಣದಾಸೆಗೆ ಬಿದ್ದು ನವಜಾತ ಶಿಶುವನ್ನು ಮಾರಾಟ ಮಾಡಿದ ದುರುಳರು | ಈ ದಂಧೆಯಲ್ಲಿ ಆಶಾ ಕಾರ್ಯಕರ್ತೆ ಕೂಡಾ ಭಾಗಿ! ತಾಯಿಯನ್ನು ಪುಸಲಾಯಿಸಿ ರೂ.25,000/- ಕ್ಕೆ ಮಗು ಮಾರಾಟ!

ಹಣದ ಆಸೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಶಿಶುವನ್ನು ಮಾರಾಟ ಮಾಡಿದ ಆರೋಪದಡಿ ಪೊಲೀಸರು ಐವರನ್ನು ಬಂಧಿಸಿದ ಘಟನೆಯೊಂದು ಸೋಮವಾರ ಸಂಜೆ ಹಳಿಯಾಳದಲ್ಲಿ ನಡೆದಿದೆ.

 

ತಟ್ಟಿಗೇರಿ ಗ್ರಾಪಂನ ಗೌಳಿವಾಡದ ಸಂತ್ರಸ್ತೆ ಸಾವಿತ್ರಿ 6 ದಿನದ ಹಿಂದೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಸಂಬಂಧಿಕರು ಹಣದಾಸೆಗೆ ಬಿದ್ದು, ಸ್ವಂತ ಅಣ್ಣ ಭಯ್ಯಾ ಪಟಕಾರೆ (30), ಆಶಾ ಕಾರ್ಯಕರ್ತೆ ರೋಜಿ ದಬಾಲಿ (35), ಅಗಸಲಕಟ್ಟಾ ಗ್ರಾಮದ ಮಮತಾಜ ಹಳಬ (30) ಅವರು ಸೇರಿ ತಾಯಿಯನ್ನು ಪುಸಲಾಯಿಸಿ ಮಗುವನ್ನು ಕೇವಲ 25 ಸಾವಿರಕ್ಕೆ ಯಲ್ಲಾಪೂರ ತಾಲೂಕಿನ ಕಿರವತ್ತಿಯ ದಂಪತಿ ಅಬ್ದುಲ್ ರೆಹಮಾನ್ ಪಟೇಲ್, ರಾಹತ್ ಪಟೇಲ್ (38) ದಂಪತಿಗಳಿಗೆ ಮಾರಾಟ ಮಾಡಿದ್ದರು.

ಕಾರವಾರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರು ಮಂಗಳವಾರ ಯಲ್ಲಾಪುರದ ಕಿರವತ್ತಿಯ ದಂಪತಿ ಮನೆಗೆ ತೆರಳಿ ಶಿಶುವನ್ನು ರಕ್ಷಿಸಿದ್ದಾರೆ. ಬಳಿಕ ಶಿರಸಿಯ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದೆ‌.

Leave A Reply

Your email address will not be published.