ದೇವಾಲಯದ ರಥೋತ್ಸವ ಸಂದರ್ಭ, ಪಲ್ಲಕ್ಕಿಗೆ ವಿದ್ಯುತ್ ತಂತಿ ತಗುಲಿ, 11 ಮಂದಿ ದುರ್ಮರಣ, 15 ಮಂದಿಗೆ ಗಾಯ!!!
ದೇವಾಲಯದ ರಥೋತ್ಸವದ ಸಂಭ್ರಮದ ವೇಳೆ ವಿದ್ಯುತ್ ಶಾಕ್ ಉಂಟಾಗಿ ಅವಘಡವೊಂದು ಸಂಭವಿಸಿ 11 ಮಂದಿ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈ ಘಟನೆ ತಮಿಳುನಾಡಿನ ತಂಜಾವೂರಿನ ಕಲಿಮೇಡು ಎಂಬಲ್ಲಿ ನಡೆದಿದೆ.
ರಥೋತ್ಸವದ ಮೆರವಣಿಗೆಯು ಮಧ್ಯರಾತ್ರಿಯ ಸುಮಾರಿಗೆ ಪ್ರಾರಂಭವಾಗಿದ್ದು, ಬೆಳಿಗ್ಗೆ 3 ಗಂಟೆಗೆ ಸುಮಾರಿಗೆ ರಥದ ಮೇಲೆ ನಿರ್ಮಿಸಲಾದ ಗುಮ್ಮಟ ಮತ್ತು ಅಲಂಕಾರಗಳು ಹೈ-ಟೆನ್ಶನ್ ತಂತಿಯನ್ನು ಮುಟ್ಟಿದಾಗ ಘಟನೆ ಸಂಭವಿಸಿದೆ.
ರಥ ಎಳೆಯುತ್ತಿದ್ದ ಭಕ್ತಾಧಿಗಳಿಗೆ ವಿದ್ಯುತ್ ಸ್ಪರ್ಶಗೊಂಡು ಈ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಕೆಲವರು ಅಸ್ವಸ್ಥಗೊಂಡಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯ ಕಾಳಿಮೇಡುವಿನಲ್ಲಿರುವ ಅಪ್ಪಾರ್ ದೇವಸ್ಥಾನದ ಪಲ್ಲಕ್ಕಿ ಉತ್ಸವ ಇಂದು ಬೆಳಗ್ಗೆ ನಡೆಯುತ್ತಿತ್ತು. ಈ ವೇಳೆ ಪಲ್ಲಕ್ಕಿ ಉತ್ಸವವು ಅಧಿಕ ವಿದ್ಯುತ್ ಪ್ರಸರಣ ಅಥವಾ ಹೈ ಟೆನ್ಶನ್ ವೈರ್ ಕೆಳಗೆ ಬಂದು ನಿಂತಾಗ ಪಲ್ಲಕ್ಕಿಗೆ ವಿದ್ಯುತ್ ತಂತಿ ತಗುಲಿ ವಿದ್ಯುತ್ ಅವಘಡ ಸಂಭವಿಸಿದೆ.
ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಸಾಮಾನ್ಯವಾಗಿ ದೇವಸ್ಥಾನದ ಉತ್ಸವದ ಮಾರ್ಗದಲ್ಲಿ ವಿದ್ಯುತ್ ಲೈನ್ ಅನ್ನು ಆಫ್ ಮಾಡಲಾಗುತ್ತದೆ. ದೇವಸ್ಥಾನದ ಪಲ್ಲಕ್ಕಿಯು ಹೆಚ್ಚು ಎತ್ತರ ಇಲ್ಲದಿದ್ದರಿಂದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿರಲಿಲ್ಲ. ಆದರೆ, ಪಲ್ಲಕ್ಕಿಗೆ ತುಂಬಾ ಅಲಂಕಾರ ಮಾಡಿದ್ದರಿಂದ ಅದು ಸ್ವಲ್ಪ ಎತ್ತರವಾಗಿದೆ. ಇದರಿಂದಲೇ ವಿದ್ಯುತ್ ಸಂಪರ್ಕಗೊಂಡು ದುರಂತ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ಪ್ರಧಾನ ಮಂತ್ರಿ ಅವರು, ತಮಿಳುನಾಡಿನ ತಂಜಾವೂರಿನಲ್ಲಿ ದುರ್ಘಟನೆಯಿಂದ ಪ್ರಾಣ ಕಳೆದುಕೊಂಡವರ ಸಂಬಂಧಿಸಿದವರಿಗೆ ತಲಾ 2 ಲಕ್ಷ ನೀಡಲಾಗುವುದು, ಗಾಯಾಳುಗಳಿಗೆ ರೂ. 50,000 ನೀಡಲಾಗುವುದು ಎಂದು ತಿಳಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಕೂಡ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.