ಆಂಬ್ಯುಲೆನ್ಸ್‌ಗೆ ಭಾರಿ ಮೊತ್ತದ ಬೇಡಿಕೆ; ಮನನೊಂದು ಬೈಕ್ ನಲ್ಲಿ ತನ್ನ 10 ವರ್ಷದ ಮಗನ ಮೃತದೇಹ ಕೊಂಡೊಯ್ದ ತಂದೆ!
ಮಗನ ಸಾವಿನಿಂದ ಕಂಗೆಟ್ಟಿರುವ ತಂದೆ ನಂತರ ತನ್ನ ಮಗನ ಶವ ಸಾಗಿಸಲು ಆಂಬ್ಯುಲೆನ್ಸ್ ನವರು ಕೇಳಿದ ಭಾರಿ ಮೊತ್ತ ಕೇಳಿ ಕಂಗಾಲಾಗಿ ಕೊನೆಗೆ ಮಗನ ಶವವನ್ನು ತಿರುಪತಿಯಿಂದ 90 ಕಿ.ಮೀ ದೂರದಲ್ಲಿರುವ ತನ್ನ ಗ್ರಾಮಕ್ಕೆ ಬೈಕ್ ನಲ್ಲಿ ಕೊಂಡೊಯ್ದ ದಾರುಣ ಘಟನೆ ನಡೆದಿದೆ.
10 ವರ್ಷದ ಬಾಲಕನೊಬ್ಬ ಅನಾರೋಗ್ಯದ ಕಾರಣ ಆರ್‌ಯುಐಎ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈ ವೇಳೆ ಶವ ಸಾಗಿಸಲು ಅಂಬುಲೆನ್ಸ್ ಚಾಲಕನನ್ನು ಕೇಳಿಕೊಂಡಾಗ 90 ಕೀ.ಮೀಗೆ 10,000 ಬಾಡಿಗೆ ಕೇಳಿದ್ದಾನೆ. ಅನಂತರ ಈ ಘಟನೆ ನಡೆದಿದೆ.
ಶವವನ್ನು ಬೈಕ್ ನಲ್ಲಿ ಸಾಗಿಸುವ ಮೊದಲು ಚಿಟ್ಟೇಲ್ ನಿವಾಸಿ ಶ್ರೀಕಾಂತ್ ಯಾದವ್ ಎಂಬುವವರು ಆಂಬ್ಯುಲೆನ್ಸ್ ಒಂದರಲ್ಲಿ ಶವವನ್ನು ಉಚಿತವಾಗಿ ಸ್ಥಳಾಂತರಿಸಲು ಒಪ್ಪಿಕೊಂಡರು. ಆದರೆ, ಆಸ್ಪತ್ರೆಯಲ್ಲಿದ್ದ ಖಾಸಗಿ ಆಂಬ್ಯುಲೆನ್ಸ್ ನಿರ್ವಾಹಕರು, ಸಿಂಡಿಕೇಟ್ ರಚಿಸಿ ಮತ್ತೊಂದು ಆಂಬ್ಯುಲೆನ್ಸ್ ನ್ನು ಆಸ್ಪತ್ರೆಗೆ ಪ್ರವೇಶಿಸದಂತೆ ತಡೆದು ಓಡಿಸಿದರು. ಆಂಬ್ಯುಲೆನ್ಸ್‌ನಲ್ಲಿ ಶವ ಸ್ಥಳಾಂತರಿಸುವುದಾದರೆ ಅದು ತಮ್ಮದಾಗಬೇಕು ಎಂದು ಪಟ್ಟು ಹಿಡಿದರು. ತನ್ನ ಸಂಬಂಧಿಕರ ಸಹಾಯದಿಂದ, ಜೀಸೇವಾ ತಂದೆ ತನ್ನ ಮಗನ ಶವವನ್ನು ಬೈಕ್ ನಲ್ಲಿ ತೆಗೆದುಕೊಂಡು ಹೋದರು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ತಿರುಪತಿ ಸಂಸದ ಮಡ್ಡಿಲ ಗುರುಮೂರ್ತಿ, ಈ ಬಗ್ಗೆ ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿ, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಆರ್‌ಡಿಒ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.