ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದ, ಹೂಡಿಕೆ ದಂತಕತೆ ವಾರೆನ್ ಬಫೆಟ್ ಗೂ ಸೈಡ್ ಹೊಡೆದ ಉದ್ಯಮಿ ಗೌತಮ್ | ವಿಶ್ವ ಸಾಹುಕಾರರ ಪಟ್ಟಿಯಲ್ಲಿ ಅದಾನಿಯದು ಎಷ್ಟನೇ ಸ್ಥಾನ ಗೊತ್ತಾ ?!

ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ, ಹೂಡಿಕೆ ದಂತಕತೆ ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿದ್ದಾರೆ. ಫೋರ್ಬ್ಸ್ ಅಂಕಿ-ಅಂಶಗಳ ಪ್ರಕಾರ ಲೆಜೆಂಡರಿ ಹೂಡಿಕೆದಾರ ವಾರೆನ್ ಬಫೆಟ್ ಅವರನ್ನು ಕೂಡಾ ಹಿಂದಿಕ್ಕಿ ಗೌತಮ್ ಅದಾನಿ ಅವರು ವಿಶ್ವದ ಐದನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಮತ್ತು ಭಾರತದ ನಂ 1 ಶ್ರೀಮಂತ ವ್ಯಕ್ತಿಯಾಗಿ ನಿಂತಿದ್ದಾರೆ. ಇನ್ನು ಇಡೀ ವಿಶ್ವದಲ್ಲಿ ಅದಾನಿಗಿಂತ ಅತಿ ಹೆಚ್ಚು ಶ್ರೀಮಂತರ ಪಟ್ಟಿಯಲ್ಲಿ ಇರೋದು ಕೇವಲ ನಾಲ್ಕೇ ಜನ !

 

ಫೋರ್ಬ್ಸ್ ಲೆಕ್ಕಾಚಾರದ ಪ್ರಕಾರ, ವಾರೆನ್ ಬಫೆಟ್ ಅವರ ನಿವ್ವಳ ಮೌಲ್ಯವು $121.7 ಬಿಲಿಯನ್ ಆಗಿದೆ. ಅದಾನಿಯವರ ಅಂದಾಜು $123.7 ಶತಕೋಟಿ ನಿವ್ವಳ ಮೌಲ್ಯವು ಅವರನ್ನು ವಿಶ್ವದ ಐದನೇ ಶ್ರೀಮಂತರನ್ನಾಗಿ ಮಾಡಿದೆ. ಯುಎಸ್ ಸ್ಟಾಕ್ ಮಾರುಕಟ್ಟೆಯಲ್ಲಿ ಶುಕ್ರವಾರದಂದು ಕಂಡ ವ್ಯಾಪಕ ಕುಸಿತದ ನಂತರ ಹೂಡಿಕೆದಾರ ಬರ್ಕ್‌ಷೈರ್ ಹ್ಯಾಥ್‌ವೇ ಷೇರುಗಳು ಶೇಕಡಾ 2 ರಷ್ಟು ಕುಸಿದಿದ್ದವು. ಅದರ ಪರಿಣಾಮ ಅದಾನಿ ಬಫೆಟ್‌ರನ್ನು ಮೀರಿಸಿದ್ದಾರೆ.

ಅಷ್ಟೇ ಅಲ್ಲದೆ ,ಗೌತಮ್ ಅದಾನಿ ಭಾರತದ ನಂಬರ್ ಒನ್ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದು, ದೇಶದ ನಂಬರ್ 2 ಶ್ರೀಮಂತ ಮುಖೇಶ್ ಅಂಬಾನಿ(ಅಂದಾಜು $104.7 ಶತಕೋಟಿ ಮೌಲ್ಯ) ಅವರಿಗಿಂತ $19 ಬಿಲಿಯನ್ ಹೆಚ್ಚು ಶ್ರೀಮಂತರಾಗಿದ್ದಾರೆ.

ಅದಾನಿಗಿಂತಲೂ ಶ್ರೀಮಂತರಾದ ನಾಲ್ವರು ವ್ಯಕ್ತಿಗಳಲ್ಲಿ ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್(ಅಂದಾಜು $130.2 ಬಿಲಿಯನ್ ಮೌಲ್ಯ), ಫ್ರೆಂಚ್ ಐಷಾರಾಮಿ ಸರಕುಗಳ ರಾಜ ಬರ್ನಾರ್ಡ್ ಅರ್ನಾಲ್ಟ್ ($167.9 ಶತಕೋಟಿ), ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ($170.2 ಶತಕೋಟಿ) ಮತ್ತು ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲೋನ್ ಮಸ್ಕ್ ($269.7 ಬಿಲಿಯನ್) ಸೇರಿದ್ದಾರೆ.

Leave A Reply

Your email address will not be published.