ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಯುರೇಕಾ ರಾಜ್ಯಮಟ್ಟದ ವಿಜ್ಞಾನ ಶಿಬಿರ

ಪ್ರಥಮ ಚಿಕಿತ್ಸೆಯ ಬಗ್ಗೆ ಪ್ರತಿಯೊಬ್ಬರೂ ತರಬೇತಿ ಪಡೆಯಬೇಕಾದುದು ಅತ್ಯಗತ್ಯ- ಡಾ. ಅನನ್ಯ ಲಕ್ಷ್ಮಿ

 

ಪುತ್ತೂರು: ಪ್ರಥಮ ಚಿಕಿತ್ಸೆ ಎಂಬ ಕೌಶಲವು ಯಾರಿಗಾದರೂ, ಎಲ್ಲಿಯಾದರೂ ಅಗತ್ಯ ಬೀಳಬಹುದು. ಸರಿಯಾಗಿ ಉಪಯೋಗಿಸಿಕೊಂಡಲ್ಲಿ ಇದರಿಂದ ಮನುಷ್ಯ ಜೀವವನ್ನು ರಕ್ಷಿಸಬಹುದು. ಹಾಗಾಗಿ, ಪ್ರತಿಯೊಬ್ಬರೂ ಪ್ರಥಮ ಚಿಕಿತ್ಸಾ ತರಬೇತಿಯನ್ನು ಪಡೆಯಬೇಕು ಎಂದು ಜೋಸೆಫ್ ಆಸ್ಪತ್ರೆ ಕಕ್ಕಿಂಜೆ ಇಲ್ಲಿನ ಸಮುದಾಯ ಆರೋಗ್ಯ ತಜ್ಞೆ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಡಾ. ಅನನ್ಯ ಲಕ್ಷ್ಮಿ ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ 12 ದಿನಗಳ ರಾಜ್ಯಮಟ್ಟದ ವಿಜ್ಞಾನ ಶಿಬಿರ ಯುರೇಕಾದ ಐದನೇ ದಿನದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಅವಘಡಗಳ ಸಂದರ್ಭಗಳಲ್ಲಿ ಆಗಬಹುದಾದ ಶಾಶ್ವತ ವೈಕಲ್ಯಗಳು ಅಥವಾ ಮರಣದಂತಹ ಪರಿಣಾಮಗಳನ್ನು ತಡೆಯಲು, ಸಂದರ್ಭಗಳನ್ನು ತಕ್ಷಣವೇ ಸರಿಯಾಗಿ ಹಾಗೂ ಸುಸೂತ್ರವಾಗಿ ನಿಭಾಯಿಸುವುದು ಅತ್ಯವಶ್ಯಕ. ಹೆಚ್ಚಾಗಿ ಮರಣಾಂತಿಕವಾದ ಈ ಎಲ್ಲಾ ಸಂದರ್ಭಗಳಲ್ಲಿ, ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವುದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ರೋಗಿ ಘಟನಾ ಸ್ಥಳದಿಂದ ಆಸ್ಪತ್ರೆಗೆ ವರ್ಗಾವಣೆಗೊಳ್ಳುವ ಮಧ್ಯದ ಕಾಲಾವಧಿಯಲ್ಲಿ ಗಾಯಾಳುವಿಗೆ ಒದಗಿಸಬಹುದಾದ ತುರ್ತು ಸೇವೆಯ ಬಗ್ಗೆ, ಅಂದರೆ ಪ್ರಥಮ ಚಿಕಿತ್ಸೆಯ ಬಗ್ಗೆ ಪ್ರತಿಯೊಬ್ಬರೂ ತರಬೇತಿ ಪಡೆಯಬೇಕಾದುದು ಅಥವಾ ಎಲ್ಲರಿಗೂ ಅದರ ಬಗ್ಗೆ ಅರಿವಿರಬೇಕಾದುದು ಅತ್ಯವಶ್ಯಕ. ಪ್ರಥಮ ಚಿಕಿತ್ಸೆ ಎಂದರೆ, ಗಾಯ ಅಥವಾ ಅವಘಡಗಳಾದಾಗ ಒದಗಿಸುವ ಆರಂಭಿಕ ಆರೈಕೆ. ಪ್ರಥಮ ಚಿಕಿತ್ಸೆ ಎಂಬುದು ಕೆಲವು ಸಂದರ್ಭಗಳಲ್ಲಿ ಸರಳ ಚಿಕಿತ್ಸೆಗಳ ಸರಣಿಯಾಗಿದ್ದರೆ, ಇನ್ನು ಕೆಲವು ಸಂದರ್ಭಗಳಲ್ಲಿ ಮಹತ್ವದ ಜೀವರಕ್ಷಕ ತಂತ್ರವಾಗಿರುತ್ತದೆ. ತರಬೇತಾದ ಒಬ್ಬ ವ್ಯಕ್ತಿಯು, ಲಭ್ಯವಿರುವ ಕೆಲವು ಉಪಕರಣಗಳ ಮೂಲಕ ಈ ಚಿಕಿತ್ಸೆಯನ್ನು ರೋಗಿ ಅಥವಾ ಗಾಯಾಳುವಿಗೆ ಒದಗಿಸಿ, ಆ ಅಮೂಲ್ಯ ಜೀವವನ್ನು ರಕ್ಷಿಸಲು ಸಾಧ್ಯ ಎಂದರು.

ಎರಡನೇ ಅವಧಿಯಲ್ಲಿ ಕಾಲೆಜಿನ ಉಪನ್ಯಾಸಕಿ ಹರ್ಷಿತಾ. ಪಿ ನೀಟ್/ಕೆಸಿಇಟಿ/ಜೆಇಇ ಪರೀಕ್ಷೆಗಳಿಗೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳ ಅಭ್ಯಾಸ ಸರಣಿ ನಡೆಯಿತು. ಈ ಯುರೇಕಾ ಶಿಬಿರವು 12 ದಿನಗಳ ಕಾಲ ನಡೆಯಲಿದ್ದು ರಾಜ್ಯದ ವಿವಿಧ ಭಾಗಗಳಿಂದ ಸುಮಾರು ನೂರು ಶಿಬಿರಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ.

Leave A Reply

Your email address will not be published.