ವಿಚಿತ್ರ, ಆದರೂ ನೀವು ನಂಬಲೇಬೇಕಾದ ಸತ್ಯ : ಈ ಗ್ರಾಮದ ಮನೆಗಳಿಗೆ ಬಾಗಿಲೇ ಇಲ್ಲ…!!

ನಾವು ಎಲ್ಲಾದರೂ ಹೊರಗಡೆ ಹೋದಾಗ, ಮನೆ ಬಾಗಿಲಿಗೆ ಬೀಗ ಹಾಕಿ ಹೋಗುವುದು ರೂಢಿ. ನಾವು ಮನೆಯಲ್ಲಿದ್ದಾಗಲೂ ಅಷ್ಟೇ ಮನೆಗೆ ಬಾಗಿಲು ಹಾಕಿಯೇ ಒಳಗಡೆ ಇರುತ್ತೇವೆ. ಏಕೆಂದರೆ ಕಳ್ಳಕಾಕರ ಭಯ. ಎಲ್ಲರೂ ಬಹಳ ಜಾಗರೂಕತೆಯಿಂದ ಇರುತ್ತೇವೆ. ಎಷ್ಟೋ ಸಮಯದಲ್ಲಿ ಬಾಗಿಲಿಗೆ ಬೀಗ ಹಾಕಿ ಹೊರಗೆ ಹೋದರೂ, ಕಳ್ಳರು ಬೀಗ ಒಡೆದು ಮನೆಯಲ್ಲಿದ್ದ ವಸ್ತುಗಳನ್ನು ದೋಚಿ ಹೋಗುವುದು ಕೂಡಾ ನಾವು ಕೇಳಿದ್ದೇವೆ‌. ಆದರೆ ಇಲ್ಲೊಂದು ಊರಲ್ಲಿ ಯಾವುದೇ ಮನೆಗೆ ಬೀಗ ಬಿಡಿ, ಬಾಗಿಲೇ ಇಲ್ಲ. ಏನಿದು ವಿಚಿತ್ರ? ಬನ್ನಿ ಇದರ ಬಗ್ಗೆ ತಿಳಿಯೋಣ.

 

ಇಲ್ಲೊಂದು ಊರಿದೆ. ಆ ಊರಿನ ಮನೆಗಳಿಗೆ ಬಾಗಿಲೂ ಇಲ್ಲ, ಬೀಗವೂ ಹಾಕುವುದಿಲ್ಲ. ಹೌದು ಬರೋಬ್ಬರಿ 4000 ಮಂದಿ ವಾಸಿಸುತ್ತಿರುವ ಈ ಊರಲ್ಲಿ ಇಲ್ಲಿಯವರೆಗೆ ಮನೆಗೆ ಅಂದರೆ ಪ್ರತಿಯೊಬ್ಬರ ಮನೆಗೂ ಬೀಗ ಹಾಕುವುದಿಲ್ಲ. ಈ ಊರು ಇರುವುದು ಮಹಾರಾಷ್ಟ್ರದ ಶನಿ ಶಿಂಗ್ನಾಪುರದಲ್ಲಿ.

‘ಸಬ್ ಭಗವಾನ್ ಭರೋಸೆ’ ಎಂಬ ಮಾತನ್ನು ಈ ಗ್ರಾಮದ ಜನರು ಅಕ್ಷರಶಃ ಅನುಸರಿಸುತ್ತಿದ್ದಾರೆ. ಏಕೆಂದರೆ ಮಹಾರಾಷ್ಟ್ರದ ಶನಿ ಶಿಂಗ್ನಾಪುರದಲ್ಲಿನ ಮಂದಿ ಹಿಂದೂ ದೇವತೆಯಾದ ಶನಿ (ಶನಿ ಗ್ರಹದ ಅಧಿಪತಿ) ಯಲ್ಲಿ ಅಪಾರ ಮತ್ತು ಅಚಲ ನಂಬಿಕೆ ಇಟ್ಟಿದ್ದಾರೆ. ಹಾಗಾಗಿ ಗ್ರಾಮಸ್ಥರ ಪ್ರಕಾರ, ಶನಿದೇವನು ಅವರ ರಕ್ಷಕ ಮತ್ತು ದುಷ್ಟ ಜನರಿಂದ ರಕ್ಷಿಸುತ್ತಾನೆ ಎಂಬ ಬಲವಾದ ನಂಬಿಕೆ ಇದೆ. ಈ ಗ್ರಾಮದಲ್ಲಿ ಯಾರೇ ಕಳ್ಳತನ ಮಾಡಲು ಪ್ರಯತ್ನಿಸಿದರೂ ಅವರಿಗೆ ಮಾರಣಾಂತಿಕ ಕಾಯಿಲೆ, ಕುರುಡುತನ ಮತ್ತು ಮಾನಸಿಕ ಅಸ್ವಸ್ಥತೆಯಿಂದಾಗಿ ತಕ್ಷಣ ಶಿಕ್ಷೆಯಾಗುತ್ತದೆ ಎಂದು ಜನರು ನಂಬುತ್ತಾರೆ.

ಅಲ್ಲದೇ ಒಬ್ಬ ವ್ಯಕ್ತಿಯು ಅಪ್ರಾಮಾಣಿಕನಾಗಿದ್ದರೆ ಮತ್ತು ಏನಾದರೂ ತಪ್ಪು ಮಾಡಿದರೆ, ಅವನು/ಅವಳು ಅಪಘಾತ ಅಥವಾ ದಿವಾಳಿತನದ ರೂಪದಲ್ಲಿ ಏಳೂವರೆ ವರ್ಷಗಳ ಕಾಲ ಕಷ್ಟದ ದಿನಗಳನ್ನು ಅನುಭವಿಸುತ್ತಾರೆ ಎಂದು ನಂಬಲಾಗಿದೆ.

Leave A Reply

Your email address will not be published.