ದುಬಾರಿಯಾಗಲಿವೆ ಅಡುಗೆಎಣ್ಣೆ ಮತ್ತು ದಿನನಿತ್ಯದ ಬಳಕೆಯ ಬೆಲೆಗಳು; ಇಲ್ಲಿದೆ ಆತಂಕದ ಕಾರಣ
ಈಗಾಗಲೇ ಜಾಗತಿಕ ಆಹಾರ ಹಣದುಬ್ಬರ ದಾಖಲೆ ಮಟ್ಟದಲ್ಲಿ ಏರಿಕೆಯಾಗೋ ಮೂಲಕ ಬೆಲೆ ಏರಿಕೆ ಹೆಚ್ಚಾಗಿದ್ದು, ಈಗ ಮತ್ತೊಂದಿಷ್ಟು ಪದಾರ್ಥಗಳ ಬೆಲೆ ದುಪ್ಪಟ್ಟಾಗಿದೆ. ಜಗತ್ತಿನ ಅತೀದೊಡ್ಡ ತಾಳೆ ಎಣ್ಣೆ (Palm Oil) ಉತ್ಪಾದಕ ರಾಷ್ಟ್ರ ಇಂಡೋನೇಷ್ಯಾ ವಿದೇಶಗಳಿಗೆ ಖಾದ್ಯ ತೈಲ ರಫ್ತು ಸ್ಥಗಿತಗೊಳಿಸುವುದಾಗಿ ತಿಳಿಸಿದೆ ಇದರಿಂದ ಜಾಗತಿಕ ಆಹಾರ ಹಣದುಬ್ಬರ ಇನ್ನಷ್ಟು ಏರಿಕೆಯಾಗೋ ಸಾಧ್ಯತೆ ಹೆಚ್ಚಿದೆ.
ಏಪ್ರಿಲ್ 28ರಿಂದ ತಾಳೆ ಎಣ್ಣೆ ರಫ್ತಿನ ಮೇಲೆ ನಿರ್ಬಂಧ ವಿಧಿಸಲಾಗುವುದು. ಈ ನಿರ್ಬಂಧ ದೇಶೀಯ ಖಾದ್ಯ ತೈಲ ಕೊರತೆ ಸಮಸ್ಯೆ ಬಗೆಹರಿಯುವ ತನಕ ಮುಂದುವರಿಯಲಿದೆ ಎಂದು ಇಂಡೋನೇಷ್ಯಾ ತಿಳಿಸಿದೆ. ಹಾಗಾಗಿ ರಷ್ಯಾ-ಉಕ್ರೇನ್ ಯುದ್ಧದಿಂದ ಈಗಾಗಲೇ ಗಗನಕ್ಕೇರಿರುವ ಖಾದ್ಯ ತೈಲದ ಬೆಲೆ ಮತ್ತಷ್ಟು ಹೆಚ್ಚಳವಾಗಲಿದೆ.
ಭಾರತ ಸೇರಿದಂತೆ ಕೆಲವು ರಾಷ್ಟ್ರಗಳು ಸೋಯಾಬಿನ್, ಸೂರ್ಯಕಾಂತಿಯಂತಹ ದುಬಾರಿ ತೈಲಗಳಿಗೆ ಪರ್ಯಾಯವಾಗಿ ಕಡಿಮೆ ಬೆಲೆಯ ತಾಳೆ ಎಣ್ಣೆಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಇಂಥ ರಾಷ್ಟ್ರಗಳ ಮೇಲೆ ಇಂಡೋನೇಷ್ಯಾದ ನಡೆ ಗಂಭೀರ ಪರಿಣಾಮ ಬೀರಲಿದೆ.