ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಮತ್ತೊಬ್ಬ ಮುಖಂಡನ ಬಂಧನ
ಏಪ್ರಿಲ್ 16ರಂದು ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮೌಲ್ವಿ ವಾಸಿಂ ಪಠಾಣ್‌ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ
ನಜೀರ್ ಅಹ್ಮದ್ ಹೊನ್ಯಾಳ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 71ನೇ ವಾರ್ಡ್‌ನಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದ ನಜೀರ್ ಎರಡು ವರ್ಷಗಳ ಹಿಂದೆ ಎಐಎಂಐಎಂ ಪಕ್ಷ ಸೇರಿದ್ದರು
ಹುಬ್ಬಳ್ಳಿ ಗಲಭೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ನಜೀರ್ ಅಹ್ಮದ್ ಹೊನ್ಯಾಳ ಜೊತೆ ಪಕ್ಷದ ಇನ್ನೊಬ್ಬ ಮುಖಂಡ ಮೊಹಮ್ಮದ್ ಆಸೀಫ್ ಸಹ ವಿಚಾರಣೆ ನಡೆಸಿದ್ದಾರೆ. ಆದರೆ ವಿಚಾರಣೆ ಬಳಿಕ ನಜೀರ್ ಅಹ್ಮದ್ ಹೊನ್ಯಾಳ ಬಂಧಿಸಿ, ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದರು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆಗೆ ಮೌಲ್ವಿಯೇ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ.
ಗಲಭೆ ಬಳಿಕ ಮಾತನಾಡಿದ್ದ ಎಐಎಂಐಎಂನ ನಜೀರ್ ಹೊನ್ಯಾಳ, ‘ಗಲಭೆಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಪಕ್ಷದ ಹೆಸರು ಕೆಡಿಸುವ ಉದ್ದೇಶದಿಂದ ಕಿಡಿಗೇಡಿಗಳು ಗಲಭೆ ಸೃಷ್ಟಿಸಿದ್ದಾರೆ” ಎಂದು ಹೇಳಿಕೆ ನೀಡಿದ್ದರು.