ಶಿಕ್ಷಕನ ಮಹಾ ಎಡವಟ್ಟಿನಿಂದ ಶಾಲೆಗೆ ಬಿತ್ತು 20 ಲಕ್ಷ ವಾಟರ್ ಬಿಲ್ !!

ಪ್ರಪಂಚದಲ್ಲಿ ಒಂದೊಂದು ರೀತಿಯ ಬುದ್ಧಿಜೀವಿಗಳು ಇರುತ್ತಾರೆ. ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡು ಫಜೀತಿ ತಂದುಕೊಳ್ಳುವವರು ಕೂಡ ಅದೆಷ್ಟೋ ಮಂದಿ ಇದ್ದಾರೆ. ಅಂತೆಯೇ ಇಲ್ಲೊಂದು ಕಡೆ ‌‌ಶಿಕ್ಷಕರೊಬ್ಬರು ಮಾಡಿದ ಎಡವಟ್ಟಿನಿಂದಾಗಿ ಶಾಲೆಗೆ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ನೀರಿನ ಬಿಲ್ ಬಂದಿದೆ.

 

ಹೌದು. ಕೊಳಕ್ಕೆ ಬರುವ ನೀರನ್ನು ನಿರಂತರವಾಗಿ ಹೊರಬಿಟ್ಟರೆ ಕೊರೊನಾ ವೈರಸ್‍ನಿಂದ ಸುರಕ್ಷತೆ ಕಾಯ್ದುಕೊಳ್ಳಬಹುದು ಎಂದು ಆಲೋಚಿಸಿದ್ದೇ ಶಿಕ್ಷಕರ ಮಹಾಎಡವಟ್ಟಿಗೆ ಕಾರಣವಾಗಿದೆ. ಕಳೆದ ಜೂನ್‌ನಿಂದ ಸೆಪ್ಟೆಂಬರ್ ಆರಂಭದವರೆಗೆ ನಳ್ಳಿಯನ್ನು ಓಪನ್ ಮಾಡಿ ನೀರು ಹರಿಬಿಟ್ಟಿದ್ದಾರೆ. ಈ ಘಟನೆ ಜಪಾನ್‍ನಲ್ಲಿ ನಡೆದಿದ್ದು, ಇದೀಗ ಭಾರೀ ಸುದ್ದಿಯಾಗಿದೆ.

ಪರಿಣಾಮ ಸುಮಾರು 2 ತಿಂಗಳಲ್ಲಿ 4,000 ಟನ್ ನೀರು ವ್ಯರ್ಥವಾಗಿ ನಳ್ಳಿಯಿಂದ ಹರಿದುಹೋಗಿದೆ. ವಾಸ್ತವವಾಗಿ, ಈ ಶಾಲೆಯ ಶಿಕ್ಷಕರಿಗೆ ನೀರಿನ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಲಾಗಿತ್ತು. ಆದರೆ ಈ ಶಿಕ್ಷಕರ ನಿರ್ಲಕ್ಷ್ಯದಿಂದ ಇಡೀ ಶಾಲೆಯೇ ನಷ್ಟ ಅನುಭವಿಸಬೇಕಾಗಿದೆ.

ವರದಿಯ ಪ್ರಕಾರ, ಕೊಳದ ನೀರಿನ ಗುಣಮಟ್ಟವನ್ನು ಕ್ಲೋರಿನ್ ಮತ್ತು ಫಿಲ್ಟರಿಂಗ್ ಯಂತ್ರಗಳಿಂದ ನಿರ್ವಹಿಸಲಾಗುತ್ತದೆ. ಆದರೆ ಶಾಲಾ ಶಿಕ್ಷಕರು ಕೊಳಕ್ಕೆ ತಾಜಾನೀರು ಬರುವಂತೆ ಮಾಡಿದರೆ ಕೋವಿಡ್ ಅನ್ನು ತಪ್ಪಿಸಬಹುದು ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದರು. ಹೀಗೆ ತಿಳಿದುಕೊಂಡ ಅವರು ಕೊಳದ ನಳ್ಳಿಯನ್ನು ತೆರೆದುಬಿಟ್ಟಿದ್ದರು. ಹೀಗಾಗಿ ಅಪಾರ ಪ್ರಮಾಣದ ನೀರು ಹರಿದುಹೋಗಿದೆ.

ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವುದನ್ನು ಗಮನಿಸಿದ ಕೆಲ ಸಿಬ್ಬಂದಿ ನಳ್ಳಿಯನ್ನು ಬಂದ್ ಮಾಡಿದ್ದಾರೆ. ಆದರೆ, ಇದರಿಂದ ಕೋಪಗೊಂಡ ಶಿಕ್ಷಕರು ಮತ್ತೆ ನಳ್ಳಿಯನ್ನು ತೆರೆದಿದ್ದಾರೆ. ಹೀಗಾಗಿ 4,000 ಟನ್ ನೀರು ವ್ಯರ್ಥವಾಗಿ ಹರಿದುಹೋಗಿದೆ.

ಈ ನಿರ್ಲಕ್ಷ್ಯಕ್ಕೆ ಸ್ಥಳೀಯ ಅಧಿಕಾರಿಗಳು ಶಾಲಾ ಶಿಕ್ಷಕರು ಹಾಗೂ ಇಬ್ಬರು ಮೇಲ್ವಿಚಾರಕರಿಗೆ 20,66,081 ರೂ. ಹಣ ಪಾವತಿಸುವಂತೆ ಆದೇಶಿಸಿದ್ದಾರೆ. ಯೊಕೊಸುಕಾ ಅಧಿಕಾರಿಗಳು ನೀರಿನ ಈ ನಷ್ಟಕ್ಕೆ ನಿವಾಸಿಗಳ ಬಳಿ ಕ್ಷಮೆಯಾಚಿಸಿದ್ದಾರೆ.

Leave A Reply

Your email address will not be published.