ಬೆಳ್ಳಂಬೆಳಗ್ಗೆ ಬೆಚ್ಚಿದ ಗ್ರಾಮ-ಒಂದೇ ಹೆಸರಿನ ಗೆಳೆಯರಿಬ್ಬರ ಭೀಕರ ಕೊಲೆ!! ಸ್ಥಳಕ್ಕೆ ಪೊಲೀಸರ ಭೇಟಿ-ತನಿಖೆ ಚುರುಕು

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಇಬ್ಬರು ಗೆಳೆಯರ ಮೃತದೇಹ ಪತ್ತೆಯಾಗಿದ್ದು, ಸಾವಿನ ಹಿಂದೆ ಹಲವು ಅನುಮಾನಗಳು ವ್ಯಕ್ತವಾದ ಬೆನ್ನಲ್ಲೇ ಥಳಿಸಿ ಕೊಲೆ ನಡೆಸಿರುವುದು ಸ್ಪಷ್ಟವಾಗಿದೆ. ಮೃತ ಯುವಕರನ್ನು ಪೆದ್ದನಹಳ್ಳಿ ಗಿರೀಶ್ ಹಾಗೂ ಆತನ ಸ್ನೇಹಿತ ಗಿರೀಶ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಒಂದೇ ಹೆಸರನ್ನು ಹೊಂದಿದವರಾಗಿದ್ದಾರೆ ಎಂದು ತಿಳಿದುಬಂದಿದೆ.

 

ಘಟನೆ ವಿವರ: ಮೃತ ಪೆದ್ದನಹಳ್ಳಿ ಗಿರೀಶ್ ಎಂಬಾತ ಕಳ್ಳತನ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸಿ ಕೆಲ ತಿಂಗಳುಗಳ ಹಿಂದೆ ಬಿಡುಗಡೆಗೊಂಡು ಹೊರಬಂದಿದ್ದು, ಆ ಬಳಿಕ ಆಟೋ ಚಾಲಕನಾಗಿ ದುಡಿಯುತ್ತಿದ್ದ. ಘಟನೆ ಬೆಳಕಿಗೆ ಬಂದ ಹಿಂದಿನ ದಿನ ರಾತ್ರಿ ಆಟೋ ಚಾಲಕ ಗಿರೀಶ್, ಹಾಗೂ ಆತನ ಸ್ನೇಹಿತ ಗಿರೀಶ್ ನನ್ನು ಇನ್ನೋರ್ವ ಸ್ನೇಹಿತ ನಂದೀಶ್ ಎಂಬಾತ ಕರೆದುಕೊಂಡು ಹೋಗಿದ್ದು, ಮಾರಾನೆಯ ದಿನ ಇಬ್ಬರ ಮೃತದೇಹ ಕೊಲೆ ನಡೆಸಿದ ರೀತಿಯಲ್ಲಿ ಪತ್ತೆಯಾಗಿದ್ದು, ಕೊಲೆಯ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿದೆ.

ಗುಬ್ಬಿ ತಾಲೂಕಿನ ಪೆದ್ದನಹಳ್ಳಿ ಎಂಬಲ್ಲಿಯ ಕೆರೆಯ ಪಕ್ಕ ಇಬ್ಬರ ಮೃತದೇಹ ಪತ್ತೆಯಾಗುತ್ತಿದ್ದಂತೆ ಸ್ಥಳಕ್ಕೆ ಗ್ರಾಮಸ್ಥರು ಆಗಮಿಸಿದ್ದು, ಇಬ್ಬರನ್ನೂ ಬಟ್ಟೆ ಬಿಚ್ಚಿಸಿ ಥಳಿಸಿ ಕೊಲೆ ನಡೆಸಲಾಗಿದೆ ಎನ್ನುವ ಅನುಮಾನ ವ್ಯಕ್ತವಾಗಿತ್ತು. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಕೊಲೆ ಎನ್ನುವುದು ಸ್ಪಷ್ಟವಾಗುತ್ತಿದ್ದಂತೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

Leave A Reply

Your email address will not be published.