ಮಾನವೀಯತೆಯೇ ಇಲ್ಲದೆ ಬೀದಿ ನಾಯಿ ಮೇಲೆ ಕಾರು ಹರಿಸಿ ವಿಕೃತಿ ಮೆರೆದ ನೀಚ |ವಿಲವಿಲ ಒದ್ದಾಡಿ ಪ್ರಾಣವನ್ನೇ ಬಿಟ್ಟ ಮೂಕ ಪ್ರಾಣಿಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆ
ಬೆಂಗಳೂರು: ಬೀದಿ ನಾಯಿಗಳ ಮೇಲೆ ಮಾನವೀಯತೆ ಇಲ್ಲದೆ ಅವುಗಳಿಗೆ ಹಿಂಸೆ ನೀಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದರು ಈ ಬೀದಿನಾಯಿಗಳಿಗೆ ನ್ಯಾಯವೇ ಇಲ್ಲವೆಂಬಂತಾಗಿದೆ. ಕ್ರೂರ ಮನುಷ್ಯನ ಅಹಂಕಾರದಿಂದ ಮೂಕ ಪ್ರಾಣಿಗಳು ನೆಮ್ಮದಿಯಿಂದ ಜೀವಿಸಲು ಕಷ್ಟ ಎಂಬ ಪರಿಸ್ಥಿತಿಗೆ ಬಂದು ನಿಂತಿದೆ.ಇದೀಗ ಅಂತದ್ದೇ ಅಮಾನವೀಯ ಘಟನೆ ಮತ್ತೊಮ್ಮೆ ಉದ್ಯಾನನಗರಿ ಬೆಂಗಳೂರಿನಲ್ಲಿ ನಡೆದಿದೆ.
ಸರ್ ಎಂ.ವಿಶ್ವೇಶ್ವರಯ್ಯ ಲೇಔಟ್ 1ನೇ ಬ್ಲಾಕ್‌ನ ನಾಗದೇವಹಳ್ಳಿಯಲ್ಲಿ ಎಪ್ರಿಲ್ 19ರ ಬೆಳಗ್ಗೆ 9 ಗಂಟೆ ಸುಮಾರಿಗೆ ಬೀದಿ ನಾಯಿಯೊಂದರ ಮೇಲೆ ಚಾಲಕ ಕಾರು ಹತ್ತಿಸಿದ್ದು,ಬಳಿಕ ನಾಯಿ ಮೃತಪಟ್ಟಿರುವ ಘಟನೆ ನಡೆದಿದೆ.
ರಸ್ತೆಯಲ್ಲಿ ನಾಯಿ ತನ್ನಪಾಡಿಗೆ ತಾನು ಹೋಗುತ್ತಿದ್ದಾಗ ಹಿಂದಿನಿಂದ ಬಂದಿರುವ ಬಿಳಿ ಬಣ್ಣದ ಕಾರು ನಾಯಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಗೆ ಬಿದ್ದ ನಾಯಿಯ ಮೇಲೆ ಕಾರಿನ ಮುಂದಿನ ಬಲಚಕ್ರ ಹಾಗೂ ಹಿಂಬದಿಯ ಬಲಚಕ್ರ ಉರುಳಿದೆ. ಕಾರು ಚಾಲಕ ಕಾರನ್ನು ನಿಲ್ಲಿಸಿದೆ ಪರಾರಿಯಾಗಿದ್ದಾನೆ. ಈ ವೇಳೆ ತೀವ್ರ ಗಾಯಗೊಂಡಿದ್ದ ನಾಯಿ ಒದ್ದಾಡಿಕೊಂಡು ರಸ್ತೆ ಪಕ್ಕಕ್ಕೆ ಬಂದಿದ್ದು, ಬಳಿಕ ನರಳಾಡಿ ಕೆಲವೇ ನಿಮಿಷಗಳಲ್ಲಿ ಪ್ರಾಣ ಬಿಟ್ಟಿದೆ. ಈ ವೇಳೆ ಸ್ಥಳೀಯರು ನಾಯಿಗೆ ಬಾಯಿಗೆ ನೀರು ಬಿಟ್ಟಿದ್ದಾರೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ದೂರುದಾರ ರಾಮಚಂದ್ರ ಭಟ್ಟ, ’19ರಂದು ಬೆಳಗ್ಗೆ 9 ಗಂಟೆಗೆ ಸುಮಾರಿಗೆ ಘಟನೆ ನಡೆದಿತ್ತು.ಆದರೆ ನನಗೆ ಅಂದು ಸಂಜೆ ವಿಷಯ ತಿಳಿಯಿತು. ಘಟನೆ ನಡೆದ ಸ್ಥಳದಲ್ಲಿದ್ದ ಮಾರ್ಕೆಟ್ ಗೆ ಬಂದಿದ್ದೆ. ಕಾರು 20-25 kmps ವೇಗದಲ್ಲಷ್ಟೇ ಇತ್ತು. ಆ ಕಾರು ಚಾಲಕ ಮನಸ್ಸು ಮಾಡಿದರೆ ನಾಯಿನ ಬದುಕು ಉಳಿಸಬಹುದಿತ್ತು. ಆದರೆ ಬೇಕು ಬೇಕಂತಲೇ ನಾಯಿಯನ್ನು ಸಾಯಿಸಿದ್ದಾರೆ. ಜ್ಞಾನ ಭಾರತಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ದೂರು ತಗೊಂಡಿರಲಿಲ್ಲ. ಆಮೇಲೆ ಕೆಲ ಜನರ ಸಹಾಯದಿಂದ ದೂರು ದಾಖಲಿಸಿದ್ದಾರೆ. ಇದೇ ರೀತಿ ಬೆಂಗಳೂರಿನಲ್ಲಿ ಹಲವು ಘಟನೆಗಳು ನಡೆಯುತ್ತಿವೆ ‘ಎಂದು ಹೇಳಿದರು.
ಈ ಬಗ್ಗೆ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.ಘಟನೆ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿ ಕಾರಿಗಾಗಿ ಹುಡುಕಾಟ ನಡೆಸುತ್ತಿದ್ದು,ಅಪಘಾತ ಎಸಗಿರುವ ಕಾರು ಸತ್ಯನಾರಾಯಣ ಎಂಬುವವರ ಹೆಸರಿನಲ್ಲಿರುವುದು ಗೊತ್ತಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಕಾರು ಚಾಲಕನನ್ನು ಬಂಧಿಸಲು ಬಲೆ ಬೀಸಿದ್ದಾರೆ.