ಡಿ.ಕೆ.ಶಿವಕುಮಾರ್ ಗೆ ಫೋನಾಯಿಸಿ ನಿಂದಿಸಿದ ಪ್ರಕರಣ ; ಸಾಯಿ ಗಿರಿಧರ್ ಗೆ ನೀಡಿದ ಜೈಲು ಶಿಕ್ಷೆಗೆ ಪುತ್ತೂರು ಜಿಲ್ಲಾ ನ್ಯಾಯಾಲಯದಿಂದ ತಡೆ !!!

ಪುತ್ತೂರು : ವಿದ್ಯುತ್ ಸಚಿವರಾಗಿದ್ದ ಡಿ. ಕೆ. ಶಿವಕುಮಾರ್ ಅವರಿಗೆ ಫೋನಾಯಿಸಿ ಬೈದು ನಿಂದಿಸಿದ್ದ ಆರೋಪದಲ್ಲಿ ಬೆಳ್ಳಾರೆಯ ಸಾಯಿ ಗಿರಿಧರ್ ರೈಗೆ ಜೈಲು ಶಿಕ್ಷೆ ವಿಧಿಸಿ ಸುಳ್ಯ ನ್ಯಾಯಾಲಯ ನೀಡಿದ ತೀರ್ಪಿಗೆ ಪುತ್ತೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಡೆ ನೀಡಿದೆ.

ಸಾಯಿ ಗಿರಿಧರ್ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ, ಮಾನ ಹಾನಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ನಾಲ್ಕು ಅಪರಾಧಗಳಡಿ ಪ್ರಕರಣವನ್ನು ದಾಖಲು ಮಾಡಲಾಗಿತ್ತು. ಇದರ ವಿಚಾರಣೆ ಪೂರ್ಣಗೊಳಿಸಿದ ಸುಳ್ಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸೋಮಶೇಖರ್ ಎ. ರವರು ಏಪ್ರಿಲ್.18 ರಂದು ತೀರ್ಪು ಪ್ರಕಟಿಸಿದ್ದರು.

ತೀರ್ಪಿನಲ್ಲಿ ನಾಲ್ಕು ಅಪರಾಧಗಳಲ್ಲಿಯೂ 2 ವರ್ಷ ಜೈಲು ಶಿಕ್ಷೆ ಮತ್ತು ಒಂದು ಪ್ರಕರಣದಲ್ಲಿ 5 ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ ಒಂದು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರು. 4 ಅಪರಾಧಗಳ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿತ್ತು. ಇದರ ಜೊತೆ ಮೇಲ್ಮನವಿ ಸಲ್ಲಿಸಲು ಆರೋಪಿಗೆ ಒಂದು ತಿಂಗಳು ಕಾಲಾವಕಾಶವನ್ನು ಕೂಡಾ ನೀಡಲಾಗಿತ್ತು.

ಸುಳ್ಯ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಆರೋಪಿ ಸಾಯಿ ಗಿರಿಧರ್ ಅವರು ಪುತ್ತೂರಿನ 5ನೇ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ತೀರ್ಪು ಅನ್ವಯ ಅಧಿಕಾರಿ, ಯಾ ಜನಪ್ರತಿನಿಧಿಗಳ ಬಳಿ ಗ್ರಾಹಕರು ಪ್ರಶ್ನೆ ಮಾಡುವುದು ಅಪರಾಧವಲ್ಲ ಎಂಬ ಆಂಶವನ್ನು ನ್ಯಾಯಪೀಠದ ಗಮನಕ್ಕೆ ತಂದ ಆರೋಪಿ ಪರ ವಕೀಲರು ಸುಳ್ಯ ನ್ಯಾಯಾಲಯದ ತೀರ್ಪಿಗೆ ತಡೆ ನೀಡುವಂತೆ ಕೋರಿದ್ದರು.

ನ್ಯಾಯಪೀಠವು ಆರೋಪಿ ಪರ ವಾದವನ್ನು ಆಲಿಸಿ, ಆರೋಪಿ ಸಾಯಿ ಗಿರಿಧರ್ ಗೆ ಸುಳ್ಯ ನ್ಯಾಯಾಲಯವು ವಿಧಿಸಿದ ಜೈಲು ಶಿಕ್ಷೆ ತೀರ್ಪಿಗೆ ತಡೆ ನೀಡಿ ಆದೇಶಿಸಿದೆ.

Leave A Reply

Your email address will not be published.