ಚಾರ್ಮಾಡಿ ಘಾಟ್ ನಲ್ಲಿ ದೇವರ ಹುಂಡಿಯಿಂದ ಹಣ ಕದಿಯುವ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ವ್ಯಕ್ತಿ !! | ಧರ್ಮದೇಟು ಕೊಟ್ಟು ಎಚ್ಚರಿಕೆ ನೀಡಿ ಕಳುಹಿಸಿದ ಸ್ಥಳೀಯರು
ಕಾಣಿಕೆ ಹುಂಡಿಯಿಂದ ಹಣ ಕದಿಯುವ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ವ್ಯಕ್ತಿಗೆ ಸ್ಥಳೀಯರು ಧರ್ಮದೇಟು ನೀಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನ ಅಣ್ಣಪ್ಪ ಸ್ವಾಮಿ ದೇವಾಲಯದಲ್ಲಿ ನಡೆದಿದೆ.
ದೇವರ ಹಣ ಕದಿಯುವ ವೇಳೆ ಸಿಕ್ಕಿ ಬಿದ್ದ ವ್ಯಕ್ತಿಯನ್ನು ಬೇಲೂರು ಮೂಲದವನು ಎಂದು ಗುರುತಿಸಲಾಗಿದೆ. ಈತ ಮೂಡಿಗೆರೆ ತಾಲೂಕಿನಿಂದ ಕೊಟ್ಟಿಗೆಹಾರ ಮಾರ್ಗವಾಗಿ ಮಂಗಳೂರಿಗೆ ಹೋಗುವಾಗ ಮಾರ್ಗ ಮಧ್ಯೆ ಸಿಗುವ ಇತಿಹಾಸ ಪ್ರಸಿದ್ಧ ಅಣ್ಣಪ್ಪ ಸ್ವಾಮಿ ದೇವಸ್ಥಾದಲ್ಲಿ ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡುತ್ತಿದ್ದ. ಕಾಣಿಕೆ ಹುಂಡಿ ಹಣವನ್ನು ಜೇಬಿಗೆ ತುಂಬಿಕೊಂಡಿದ್ದ. ಆ ವೇಳೆಗೆ ಅಲ್ಲಿದ್ದ ಸ್ಥಳೀಯರು ಅದನ್ನು ಗಮನಿಸಿ ಆತನಿಗೆ ಧರ್ಮದೇಟು ನೀಡಿದ್ದಾರೆ.
ಹಲ್ಲೆಗೊಳಗಾದ ವ್ಯಕ್ತಿಯೂ ಘಟನೆ ಕುರಿತಂತೆ ವೀಡಿಯೋ ಮಾಡಿದ್ದು, ವೀಡಿಯೋದಲ್ಲಿ ಹುಂಡಿಗೆ ಒಂದಿಷ್ಟು ಹಣವನ್ನು ಹಾಕಿದ್ದೆ. ನಂತರ ಮತ್ತೊಂದಿಷ್ಟು ಹಣವನ್ನು ಹಾಕಲೆಂದು ಕೈಯಲ್ಲಿ ಹಿಡಿದುಕೊಂಡಿದ್ದೆ ಎಂದು ಹೇಳಿಕೊಂಡಿದ್ದಾನೆ. ಆದರೆ ಅಲ್ಲಿದ್ದ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಆತ ಹುಂಡಿಯಿಂದ ಹಣವನ್ನು ಜೇಬಿಗೆ ಹಾಕಿಕೊಳ್ಳುತ್ತಿದ್ದ ದೃಶ್ಯವನ್ನು ಕಂಡಿದ್ದಾರೆ. ನಂತರ ಸುಳ್ಳು ಹೇಳಬೇಡ ಎಂದು ನಾಲ್ಕು ಬಾರಿಸಿದ್ದಾರೆ. ಕೊನೆಗೆ ಆತನ ಹೋಗಲಿ ಬಿಡಿ ನನ್ನದೆ ತಪ್ಪು ಎಂದು ಒಪ್ಪಿಕೊಂಡಿದ್ದಾನೆ. ಈ ದೇವಾಲಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಲಿದ್ದು, ಹುಂಡಿ ಹಣ ಕದಿಯುತ್ತಿದ್ದ ವ್ಯಕ್ತಿಗೆ ಧರ್ಮದೇಟು ನೀಡಿದ ಯುವಕರು ಮತ್ತೊಮ್ಮೆ ಹೀಗೆ ಮಾಡಬೇಡ ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಅಣ್ಣಪ್ಪಸ್ವಾಮಿ ಎಂದರೆ ಈ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ವಾಹನಗಳು, ಲಕ್ಷಾಂತರ ಜನ ಭಯ-ಭಕ್ತಿಯಿಂದ ಪೂಜೆ ಮಾಡುತ್ತಾರೆ. ಕಾಣಿಕೆ ಹಾಕಿ ಮುಂದೆ ಹೋಗುತ್ತಾರೆ. ಈ ಮಾರ್ಗದಲ್ಲಿ ಸಂಚರಿಸುವಾಗ ಇಲ್ಲಿ ಪೂಜೆ ಮಾಡಿ ಹೋದರೆ ಸಂಚರಿಸುವ ಮಾರ್ಗದಲ್ಲಿ ಯಾವುದೇ ಅನಾಹುತ-ಅಪಾಯಗಳು ಸಂಭವಿಸುವುದಿಲ್ಲ ಎಂಬ ನಂಬಿಕೆ ಸ್ಥಳೀಯರದ್ದಾಗಿದೆ. ಹಾಗಾಗಿ, ಈ ಮಾರ್ಗದಲ್ಲಿ ಸಂಚರಿಸುವ ಪ್ರತಿಯೊಬ್ಬರೂ ಈ ಅಣ್ಣಪ್ಪ ಸ್ವಾಮಿಗೆ ಪೂಜೆ ಮಾಡಿ, ಕಾಣಿಕೆ ಹಾಕದೆ ಮುಂದೆ ಹೋಗಲ್ಲ. ಆದರೆ, ಇಂತಹ ಭಕ್ತರ ಹಾಗೂ ಕಾಣಿಕೆ ಹಣವನ್ನು ಕದಿಯುತ್ತಿದ್ದ ಕಾರಣ ಕಳ್ಳನಿಗೆ ಧರ್ಮದೇಟು ನೀಡಿದ್ದಾರೆ.