‘ಕಣ್ಣಾ ಮುಚ್ಚೇ ಕಾಡೇ ಗೂಡೇ’ ಆಟ ಆಡುವ ಎಂದು ವರ‌ನ ಕಣ್ಣಿಗೆ ಬಟ್ಟೆ ಕಟ್ಟಿ ತಕ್ಷಣವೇ ಕತ್ತು ಸೀಳಿದ ವಧು!!!

ಮದುವೆ ನಿಶ್ಚಯ ಆಯಿತೆಂದರೆ ಸಾಕು, ಸಂಭ್ರಮವೋ ಸಂಭ್ರಮ. ಹಾಗೆನೇ ಮದುವೆಗೆ ಮೊದಲು ಹುಡುಗ, ಹುಡುಗಿ ಒಬ್ಬರನ್ನೊಬ್ಬರು ಅರಿತುಕೊಳ್ಳಲಿ ಅಂತ ಹೊರಗಡೆ ಸುತ್ತಾಡೋದು ನಡೆಸೋದು ಈಗಿನ ದಿನಗಳಲ್ಲಿ ಕಾಮನ್. ಸುತ್ತಾಟ ಅಷ್ಟರಲ್ಲೇ ಇದ್ದರೆ ಉತ್ತಮ. ಆದರೆ ಇದೇ ಸುತ್ತಾಟ ಕಂಟಕವಾದರೆ? ಹೌದು ಇಲ್ಲಿ ಈ ಸುತ್ತಾಟ ವರನ ಬಾಳಿಗೆ ಬೆಂಕಿ ಇಟ್ಟಿದೆ. ಹೊಸ ಕನಸಿನೊಂದಿಗೆ, ಮುಂದಿನ ಭವಿಷ್ಯದ ಬಗ್ಗೆ ಮಾತನಾಡುವ ಅಂತ ವಧುವಿನ ಜೊತೆ ಹೋದವನು ಇದೀಗ ಆಸ್ಪತ್ರೆ ಸೇರಿದ್ದಾನೆ. ಅವನ ಪಕ್ಕ ನಿಂತು ಸಮಾಧಾನ ಮಾಡಬೇಕಿದ್ದ ವಧು ಪರಾರಿಯಾಗಿದ್ದಾಳೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ ಅಲ್ಲಿ ಆಗಿದ್ದಾದರೂ ಏನು? ಇಲ್ಲಿದೆ ಒಂದು ಆಘಾತಕಾರಿ ಘಟನೆಯ ವರದಿ.

 

ಅವರಿಬ್ಬರು ಭಾವಿ ವಧು ಹಾಗೂ ವರ. ಇಬ್ಬರ ಮದುವೆಯನ್ನು ಮನೆಯಲ್ಲೇ ನಿಶ್ಚಯ ಮಾಡಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಇದೆ. ಅದಕ್ಕೂ ಮುನ್ನ ಒಬ್ಬರಿಗೊಬ್ಬರು ಅರಿತುಕೊಳ್ಳಲಿ ಎಂದು ಇಬ್ಬರನ್ನೂ ಸುತ್ತಾಡೋಕೆ ಮನೆ ಮಂದಿ ಕಳಿಸಿದ್ದರು. ಆಗ ಆಗಿದ್ದೇ ಯಡವಟ್ಟು. ಇಂಥದ್ದೊಂದು ಘಟನೆ ನಡೆದಿರುವುದು ತೆಲಂಗಾಣ ರಾಜ್ಯದ ಅನಕಾಪಲ್ಲಿ ಜಿಲ್ಲೆಯ ಬುಚ್ಚಯ್ಯ ಪೇಟೆ ಮಂಡಲದ ಕೊಮ್ಮಲಪುಡಿಯಲ್ಲಿ.

ಮುಂದಿನ ತಿಂಗಳು 20 ರಂದು ರಾಮ ನಾಯುಡು ಹಾಗೂ ಪುಷ್ಪ ಅವರ ವಿವಾಹ ನಿಶ್ಚಯವಾಗಿತ್ತು. ಹೀಗಾಗಿ ಇಬ್ಬರೂ ಸುತ್ತಾಡಿಕೊಂಡು, ಮದುವೆ ಸಾಮಗ್ರಿ ಖರೀದಿ ಮಾಡಲು ದ್ವಿಚಕ್ರ ವಾಹನದಲ್ಲಿ ಹೊರಗಡೆ ಹೊರಟಿದ್ದರು.

ಹಾಗೇ ಶಾಪಿಂಗ್ ಮುಗಿಸಿ ಬಾಬಾ ಆಶ್ರಮದಲ್ಲಿ ಸಮಯ ಕಳೆಯಲೆಂದು ಗಾಡಿ ನಿಲ್ಲಿಸಿದ್ದರು. ಈ ವೇಳೆ ವಧು ಪುಷ್ಪಾ ಕಣ್ಣಾ ಮುಚ್ಚಾಲೆ ಆಟ ಆಡೋಣ ಅಂತ ಕೇಳಿದ್ದಾಳೆ. ಅದಕ್ಕೆ ವರ ರಾಮ ನಾಯಡು ಒಪ್ಪಿದಾಗ, ತಾನೇ ಆತನ ಕಣ್ಣಿಗೆ ಬಟ್ಟೆ ಕಟ್ಟಿದ್ದಾಳೆ. ಬಟ್ಟೆ ಕಟ್ಟಿ ವಧು ಊಹಿಸಲಾರದ ಕೃತ್ಯ ಮಾಡಿದ್ದಾಳೆ.

ಹೌದು. ಆಟ ಆಡುವ ನೆಪದಲ್ಲಿ ಚಾಕುವಿನಿಂದ ಹುಡುಗನ ಕತ್ತು ಕೊಯ್ದಿದ್ದಾಳೆ. ನಂತರ ತನ್ನ ಸ್ವಂತ ದ್ವಿಚಕ್ರ ವಾಹನದಲ್ಲಿ ಭಾವಿ ಪತಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾಳೆ. ಆಸ್ಪತ್ರೆಗೆ ಸೇರಿಸಿದ ಆಕೆ, ಯುವಕನ ಗಂಟಲಿಗೆ ಏನೋ ಇರಿದಿದೆ ಎಂದು ವೈದ್ಯಕೀಯ ಸಿಬ್ಬಂದಿಗೆ ತಿಳಿಸಿ ಅಲ್ಲಿಂದ ಪರಾರಿಯಾಗಿದ್ದಾಳೆ.

ಇನ್ನು ಆತನಿಗೆ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು, ಆತನ ಸ್ಥಿತಿ ಗಂಭೀರವಾಗಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನನ್ನೊಂದಿಗೆ ಮದುವೆ ಇಷ್ಟವಿಲ್ಲದ ಕಾರಣ ಈ ರೀತಿ ಮಾಡಿದ್ದಾಳೆ ಎಂದು ಯುವಕ ಹೇಳಿದ್ದಾನೆ. ದಾಳಿ ಮಾಡಿದ ನಂತರ ಅವಳೇ ಹುಡುಗನ ಬಳಿ ಮದುವೆ ಇಷ್ಟ ಇಲ್ಲವೆಂದು ಹೇಳಿಕೊಂಡಿದ್ದಾಳಂತೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.