ರೈತರಿಂದ ರೈತರಿಗಾಗಿ ಇರುವ “ಹಾಪ್ ಕಾಮ್ಸ್” ಬಗ್ಗೆ ನಿಮಗೆಷ್ಟು ಗೊತ್ತು ?? | ನಾಡಿನ ರೈತರ ಪರವಾಗಿ ಕೆಲಸ ಮಾಡುತ್ತಿರುವ ಈ ಸಂಸ್ಥೆಯ ಕುರಿತು ಇಲ್ಲಿದೆ ಮಾಹಿತಿ

ರೈತ ನಮ್ಮ ದೇಶದ ಬೆನ್ನೆಲುಬು. ತುತ್ತು ಅನ್ನವ ತಿನ್ನುವ ಮೊದಲು ರೈತನನ್ನು ನೆನೆ ಎಂಬ ನಾಣ್ಣುಡಿಯಂತೆ ಇಂದು ನಾವೆಲ್ಲರೂ ಹೊಟ್ಟೆ ತುಂಬುವಷ್ಟು ಊಟ ಮಾಡಿ ಹಸಿವೆ ಇಲ್ಲದೆ ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿದ್ದರೆ, ಇದಕ್ಕೆ ರೈತನ ಶ್ರಮದ ಬೆವರೇ ಮುಖ್ಯ ಕಾರಣ. ಇಂತಹ ರೈತನಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕು. ನಮಗೆಲ್ಲರಿಗೂ ಡಾಕ್ಟರ್‌, ಲಾಯರ್‌, ಎಂಜಿನಿಯರ್‌ಗಳು ಮಾತ್ರ ಮುಖ್ಯ ಎನಿಸುತ್ತಾರೆ. ಆದರೆ, ಮೂರು ಹೊತ್ತು ಅನ್ನಕ್ಕೆ ಕಾರಣವಾಗಿರುವ ರೈತನ ನೆನಪು ಮಾತ್ರ ಬರುವುದಿಲ್ಲ.

ಇಂತಹ ರೈತರು ತಾವು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ಪ್ರತಿದಿನವೂ ಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಇಂತಹ ರೈತರ ಬೆನ್ನಿಗೆ ನಿಂತಿದೆ ಈ ಸಂಸ್ಥೆ. ರೈತರಿಂದ ರೈತರಿಗಾಗಿ ಇರುವ ಈ ಸಂಸ್ಥೆ ರಾಜ್ಯದೆಲ್ಲೆಡೆ ಇದೀಗ ತನ್ನ ಅಂಗ ಸಂಸ್ಥೆಯನ್ನು ಸ್ಥಾಪಿಸುವ ಮುನ್ನುಗ್ಗುತ್ತಿದೆ. ಆ ಸಂಸ್ಥೆ ಬೇರಾವುದೂ ಅಲ್ಲ, “ಹಾಪ್ ಕಾಮ್ಸ್”.

ಹಾಪ್ ಕಾಮ್ಸ್ ಎಂದರೇನು??

ರೈತರಿಂದ ರೈತರಿಗಾಗಿ ಇರುವ ಹಾಪ್ ಕಾಮ್ಸ್ ಸದಾ ನಾಡಿನ ರೈತರ ಪರವಾಗಿ ಕೆಲಸ ಮಾಡುತ್ತಿದೆ. ರೈತರಿಗೆ ನೆರವಾಗುವ ದೃಷ್ಟಿಯಿಂದ ನೇರವಾಗಿ ರೈತರಿಂದಲೇ ತರಕಾರಿ, ಹಣ್ಣುಹಂಪಲನ್ನು ಖರೀದಿಸಿ ಹಾಪ್ ಕಾಮ್ಸ್ ಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ದೃಷ್ಟಿಯನ್ನು ಹಾಪ್ ಕಾಮ್ಸ್ ಹೊಂದಿದೆ.‌

ಪ್ರತಿನಿತ್ಯ ಕೋಟ್ಯಾಂತರ ರೂ. ವಹಿವಾಟು ನಡೆಸುವ ಹಾಪ್ ಕಾಮ್ಸ್, ರೈತರು ಹಾಗೂ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಅತ್ತ ರೈತರಿಗೂ ಉತ್ತಮ ಬೆಲೆ, ಇತ್ತ ಗ್ರಾಹಕರಿಗೂ ನಿರ್ದಿಷ್ಟ ಬೆಲೆ ನಿಗದಿ ಪಡಿಸಿ ವ್ಯಾಪಾರ ಮಾಡಲಾಗುತ್ತಿದೆ. ಅಲ್ಲದೇ ಪ್ರತೀ ನಿತ್ಯವೂ ತರಕಾರಿ ಹಾಗೂ ಹಣ್ಣುಗಳ ಬೆಲೆಯನ್ನು ನಿಗದಿ ಪಡಿಸಿ ಇಲ್ಲಿ ವಹಿವಾಟು ನಡೆಸಲಾಗುತ್ತಿದೆ.

ಯಾವುದೇ ತರಕಾರಿಯನ್ನು ತಲಾ 10 ಕೆ.ಜಿ, ಈರುಳ್ಳಿ 25 ಕೆ.ಜಿ, ಬೆಳ್ಳುಳ್ಳಿ-ಶುಂಠಿ 5 ಕೆ.ಜಿ. ಟೊಮೇಟೋ 15 ಕೆ.ಜಿ.ಗಿಂತ ಹೆಚ್ಚು ಖರೀದಿಸಿದರೆ ದರದಲ್ಲಿ ರಿಯಾಯಿತಿ ಸಿಗಲಿದೆ. ಕೇವಲ ಸಣ್ಣಪುಟ್ಟ ತರಕಾರಿ ವ್ಯಾಪಾರಿಗಳಿಗೆ ಮಾತ್ರವಲ್ಲದೆ ಮದುವೆ-ಮುಂಜಿ ಇತ್ಯಾದಿ ಕಾರ್ಯಕ್ರಮಗಳಿಗೆ ಹೆಚ್ಚು ತರಕಾರಿ ಬೇಕಾದವರಿಗೂ ಇದು ಅನ್ವಯವಾಗಲಿದೆ.

ಅದಲ್ಲದೆ ಕ್ಯಾಶ್ ಅಂಡ್ ಕ್ಯಾರಿ ಮಳಿಗೆಯಲ್ಲಿ ಸಾಲ ಸಿಗುವುದಿಲ್ಲ. ಎಲ್ಲವೂ ನಗದು ವ್ಯವಹಾರವಾಗಿರುತ್ತದೆ. ರೈತರಿಗೆ ಹಣ ಪಾವತಿಸಬೇಕಾಗಿರುವುದರಿಂದ ‘ಕ್ಯಾಶ್ ಅಂಡ್ ಕ್ಯಾರಿ’ ಮಳಿಗೆ ಎಂದು ಕೆಲವೆಡೆ ಹೆಸರಿಡಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಾಪ್ ಕಾಮ್ಸ್ ತನ್ನ ವ್ಯವಹಾರ ಹೊಂದಿದೆ. ರೈತರ ಅಭಿವೃದ್ಧಿಗೆ ನಿಂತಿರುವ ಈ ಸಂಸ್ಥೆ ಇನ್ನಷ್ಟು ಏಳಿಗೆ ಕಾಣಲಿ ಎಂಬುದೇ ಆಶಯ.

Leave A Reply

Your email address will not be published.