ವ್ಯಕ್ತಿಯೊಬ್ಬರ ಕಣ್ಣಿನಲ್ಲಿ ಮೊಟ್ಟೆ ಇಟ್ಟು ಮರಿ ಮಾಡಿದ ನೊಣ!|ವೈದ್ಯರನ್ನೇ ಬೆಚ್ಚಿ ಬೀಳಿಸಿದೆ ಈ ಭಯಾನಕ ಘಟನೆ
ಈ ಹಿಂದೆ ಒಬ್ಬಾಕೆಯ ತಲೆ ಕೂದಲಲ್ಲಿ ಹಕ್ಕಿ ಗೂಡು ಕಟ್ಟಿ ಮರಿ ಇಟ್ಟಿದ್ದನ್ನು ನಾವು ನೋಡಿದ್ದೀವಿ. ಆದ್ರೆ ಕೂದಲಾದರು ಸರಿ ಅಷ್ಟೇನೂ ಭಯಾನಕವಲ್ಲ.ಆದ್ರೆ ಇಲ್ಲೊಬ್ಬನ ಕಣ್ಣುಗಳಲ್ಲಿ ನೊಣ ಮೊಟ್ಟೆ ಇಟ್ಟು ಮರಿ ಮಾಡಿದ ವಿಚಿತ್ರ ಘಟನೆ ನಡೆದಿದೆ.
ಹೌದು.ಫ್ರಾನ್ಸ್‌ನ ಅನಾಮಧೇಯ ವ್ಯಕ್ತಿಯೊಬ್ಬರ ಕಣ್ಣಿನಲ್ಲಿ ನೊಣ ಮೊಟ್ಟೆ ಇಟ್ಟು ಮರಿ ಮಾಡಿದೆ. ಈ ಭಯಾನಕ ಘಟನೆಯಲ್ಲಿ, 53 ವರ್ಷದ ವ್ಯಕ್ತಿಯು ಕೆಲವು ದಿನಗಳಿಂದ ಬಲಗಣ್ಣಿನಲ್ಲಿ ತುರಿಕೆ ಅನುಭವಿಸುತ್ತಿದ್ದರು. ತುರಿಕೆ ಹೆಚ್ಚಾಗುತ್ತಿದ್ದಂತೆ ಅದು ಅವರಿಗೆ ಕಿರಿಕಿರಿ ಉಂಟಾಗಲು ಶುರು ಮಾಡಿತು. ಆಗ ತಕ್ಷಣ ಸೇಂಟ್-ಎಟಿಯೆನ್ನೆ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಪರೀಕ್ಷಿಸಿಕೊಳ್ಳಲು ತೆರಳಿದರು. ಆಗ ಅವರಿಗೆ ತನ್ನ ಕಣ್ಣಿನ ತುರಿಕೆಗೆ ಕಾರಣ ಒಂದು ಡಜನ್ ನೊಣಗಳ ಲಾರ್ವಗಳು ಎಂದು ತಿಳಿದುಬಂದಿದೆ. ನಂತರ ವೈದ್ಯರು ಪರೀಕ್ಷೆ ನಡೆಸಿ ವ್ಯಕ್ತಿಯ ಕಣ್ಣುಗಳಲಿದ್ದ ನೊಣದ ಮರಿಗಳನ್ನು ತೆಗೆದು ಹಾಕಿದ್ದಾರೆ.
ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಬಲಗಡೆಯ ಕಣ್ಣನ್ನು ವೈದ್ಯರು ಸ್ಕ್ಯಾನ್ ಮಾಡಿದರು, ಸ್ಕ್ಯಾನ್‌ನಲ್ಲಿ ಕಂಡು ಬಂದ ವಿಷಯ ವೈದ್ಯರನ್ನೇ ಬೆಚ್ಚಿ ಬೀಳಿಸಿದೆ.ಫ್ರಾನ್ಸ್ ನ ಆ ವ್ಯಕ್ತಿಯ ಬಲಗಣ್ಣಿನಲ್ಲಿ ನೊಣ ಮರಿ ಹಾಕಿದೆ ಎಂದು ವೈದ್ಯರು ಬಹಿರಂಗಪಡಿಸಿದರು. ಕಣ್ಣಿನಲ್ಲಿ ನೊಣಗಳ ಮರಿ ಪತ್ತೆಯಾಗಿರುವ ವಿಚಾರವನ್ನು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಇತ್ತೀಚೆಗೆ ಪ್ರಕಟಿಸಲಾಗಿದೆ.ಕಣ್ಣಿನ ಪರೀಕ್ಷೆಯಲ್ಲಿ ಕಾರ್ನಿಯಾದ ಸುತ್ತಲೂ ‘ಡಜನ್‌ಗಿಂತಲೂ ಹೆಚ್ಚು, ಅರೆಪಾರದರ್ಶಕ ಲಾರ್ವಾ’ಗಳು ಕಂಡು ಬಂದಿದೆ ಎಂದು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ವರದಿಯಲ್ಲಿ ಬಹಿರಂಗಪಡಿಸಿದೆ.
‘ಆ ದಿನ ತಾನು ಕುದುರೆ ಮತ್ತು ಕುರಿ ಸಾಕಾಣಿಕೆ ಕೇಂದ್ರದ ಬಳಿ ತೋಟದ ಕೆಲಸ ಮಾಡುತ್ತಿರುವಾಗ, ನನ್ನ ಕಣ್ಣಿಗೆ ಏನೋ ಪ್ರವೇಶಿಸಿದಂತಾಯಿತು’ ಎಂದು ವ್ಯಕ್ತಿ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.ಸಾಮಾನ್ಯವಾಗಿ ಲಾರ್ವಾಗಳನ್ನು ಸುಲಭವಾಗಿ ತೆಗೆದು ಹಾಕಲಾಗುವುದಿಲ್ಲ ಮತ್ತು ಕಣ್ಣು ತೊಳೆಯುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಅವುಗಳನ್ನು ತೆಗೆದುಹಾಕುವ ಏಕೈಕ ಮಾರ್ಗವೆಂದರೆ ಫೋರ್‌ಸೆಪ್ಸ್ ಬಳಸಿ ಕಣ್ಣಿನಿಂದ ಅವುಗಳನ್ನು ದೈಹಿಕವಾಗಿ ಕಿತ್ತುಹಾಕುವುದು ಎಂದು ತಜ್ಞರು ಹೇಳಿದ್ದಾರೆ. ಇತರ ವಿಧಾನಗಳಿಂದ ತೆಗೆದು ಹಾಕಬಹುದಾದರೂ, ಜೀವಿಗಳು ಓರಲ್ ಹುಕ್ಕುಗಳನ್ನು ಹೊಂದಿರುವುದರಿಂದ ಅಪಾಯಕಾರಿ ಎಂದು ಹೇಳಿದ್ದಾರೆ.
ಆದ್ದರಿಂದ, ವೈದ್ಯರು ಎಲ್ಲಾ ಕಣ್ಣಿನಲ್ಲಿರುವ ನೊಣದ ಲಾರ್ವಾಗಳನ್ನು ದೈಹಿಕವಾಗಿ ತೆಗೆದುಹಾಕಲು ಫೋರ್‌ಸೆಪ್ಸ್ ಅನ್ನು ಬಳಸಿದರು. ಕಾಂಜಂಕ್ಟಿವಾ ಒಳಗೆ ಇನ್ನೂ ಹೆಚ್ಚು ಲಾರ್ವಾಗಳು ಕಣ್ಣುರೆಪ್ಪೆಯನ್ನು ಆವರಿಸಿರುವ ಪೊರೆ ಮತ್ತು ಬಿಳಿ ಭಾಗಗಳು ಕಂಡುಬಂದಿವೆ ಎಂದು ವೈದ್ಯರು ಹೇಳಿದ್ದರು.
ನೊಣದ ಮರಿಗಳನ್ನು ಯಶಸ್ವಿಯಾಗಿ ಹೊರತೆಗೆದ ನಂತರ, ವೈದ್ಯರು ಅವುಗಳನ್ನು ಓಸ್ಟ್ರಸ್ ಓವಿಸ್ ಲಾರ್ವಾ ಎಂದು ಗುರುತಿಸಿದರು. “ನೊಣದ ಲಾರ್ವಾಗಳಿಂದ ಕಣ್ಣಿನ ಹೊರಗಿನ ರಚನೆಗಳು ಮುಚ್ಚಿಕೊಂಡಿವೆ” ಮತ್ತು ಲಾರ್ವಾಗಳು ಕಣ್ಣುಗುಡ್ಡೆಯನ್ನು ಕೊರೆಯಬಹುದು ಮತ್ತು ಅದು ಒಬ್ಬರ ದೃಷ್ಟಿಗೆ ತೀವ್ರ ಹಾನಿಯನ್ನುಂಟುಮಾಡುತ್ತದೆ ಎಂದು ಸೇಂಟ್-ಎಟಿಯೆನ್ನೆ ವಿಶ್ವವಿದ್ಯಾಲಯದ ಆಸ್ಪತ್ರೆಯ ವೈದ್ಯರು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿಯಲ್ಲಿ ಬರೆದಿದ್ದಾರೆ.