ಭಾರತದಲ್ಲಿರುವ ಮುಸ್ಲಿಮರ ಪೂರ್ವಜರು ಹಿಂದೂಗಳು: ಡಾ.ಸುಬ್ರಮಣಿಯನ್ ಸ್ವಾಮಿ
ಮೂಲ್ಕಿ: ಭಾರತದಲ್ಲಿ ನೆಲೆಸಿರುವ ಮುಸ್ಲಿಮರ ಪೂರ್ವಜರು ಹಿಂದುಗಳಾಗಿದ್ದು, ಅವರ ಡಿಎನ್ಎ ಪರೀಕ್ಷೆ ಮಾಡಿದಲ್ಲಿ ದಾಖಲೆ ಸಿಗಲು ಸಾಧ್ಯವಿದೆ ಎಂದು ರಾಜ್ಯಸಭಾ ಸದಸ್ಯ ಕೇಂದ್ರ ಮಾಜಿ ಸಚಿವ, ಹಿಂದೂ ವಿರಾಟ್ ಹಿಂದೂಸ್ಥಾನ್ ಸಂಗಮದ ಅಧ್ಯಕ್ಷ ಡಾ.ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಮಯೂರಿ ಫೌಂಡೇಶನ್ ಮೂಲ್ಕಿ ಸಂಸ್ಥೆಯ ಆಶ್ರಯದಲ್ಲಿ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರು ಭಾಗದಲ್ಲಿ ಶನಿವಾರ ಜರುಗಿದ ಸಾಮ್ರಾಟ್ ಅಶೋಕ ಚಕ್ರವರ್ತಿಯ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಪ್ರಧಾನ ಭಾಷಣ ಮಾಡುತ್ತಾ ಈ ಮಾತನ್ನು ಹೇಳಿದ್ದಾರೆ.
ಸಂಸದ ಓವೈಸಿಗೆ ನಾನು ಮುಸ್ಲಿಮರ ಡಿಎನ್ಎ ಪರೀಕ್ಷೆ ಕುರಿತು ಸವಾಲು ಹಾಕಿದ್ದೆ, ಆದರೆ ಹೆದರಿಕೆಯಿಂದ ಒವೈಸಿ ಅದನ್ನು ಸ್ವೀಕರಿಸಲಿಲ್ಲ. ಬ್ರಿಟಿಷರು ನಮ್ಮ ಇತಿಹಾಸವನ್ನು ತಿರುಚುವ ಕಾರ್ಯ ಮಾಡಿದ್ದು, ಇವರೆಗೂ ಅದನ್ನು ಬದಲಿಸಿ ನೈಜ ಇತಿಹಾಸವನ್ನು ತಿಳಿಸುವ ಕಾರ್ಯ ನಮ್ಮ ದೇಶದಲ್ಲಿ ಆಗಿಲ್ಲ ಎಂದರು. 1650ರ ದಶಕದಲ್ಲಿ ವಿದೇಶಿಗರು ಖಾಲಿ ಹಡಗಿನಲ್ಲಿ ಬಂದು ಇಲ್ಲಿಂದ ವಸ್ತುಗಳನ್ನು ಕೊಂಡೊಯ್ಯುತ್ತಿದ್ದರು. ಇಂದು ನಾವು ವಿದೇಶದ ವಸ್ತುಗಳನ್ನು ಅವಲಂಬಿಸುವ ಸ್ಥಿತಿಗೆ ಬಂದಿದ್ದೇವೆ. ನಮ್ಮ ದೇಶದಲ್ಲಿ 12 ತಿಂಗಳು ಕೃಷಿಗೆ ಪೂರಕವಾದ ಅವಕಾಶವಿದ್ದು ಇತರ ದೇಶಗಳಲ್ಲಿ ಕೇವಲ 5 ತಿಂಗಳು ಮಾತ್ರ ಕೃಷಿ ಕಾರ್ಯ ನಡೆಸಬಹುದು ಎಂದು ಹೇಳಿದರು.