ಕಸದ ಗಾಡಿಗೆ ಮಹಿಳಾ ಸಾರಥ್ಯ ; ಇಲ್ಲಿದೆ ಸ್ಫೂರ್ತಿದಾಯಕ ನಿದರ್ಶನ
ಮಹಿಳೆಯರು ಪ್ರತಿ ಕ್ಷೇತ್ರಕ್ಕೂ ಹೆಜ್ಜೆ ಇಡುತ್ತಿದ್ದು ಈಗ ನಗರದ ಕಸ ನಿರ್ವಹಣೆಗೂ ಮುಂದಾಗಿದ್ದಾರೆ. ಇದೀಗ ಕಸ ಸಂಗ್ರಹಣಾ ವಾಹನಗಳಲ್ಲಿಯೂ ಮಹಿಳಾ ಚಾಲಕಿಯರು ಕಾಣಿಸಿಕೊಳ್ಳುತ್ತಿದ್ದಾರೆ. ದ.ಕ. ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸ್ವಚ್ಛತಾ ವಾಹನದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಕಡೇಶಿವಾಲಯದ ಲಕ್ಷ್ಮೀ ಪಾತ್ರರಾಗಿದ್ದಾರೆ.
66 ಗ್ರಾಪಂಗಳ ಪೈಕಿ 39 ಗ್ರಾಪಂಗಳ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ (ಸ್ವಚ್ಛ ವಾಹಿನಿಗಳು) ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರೇ ಚಾಲಕಿಯರು ಎಂಬುದು ವಿಶೇಷ. ಇವರಲ್ಲಿ ಜಿಪಂ ವ್ಯಾಪ್ತಿಯ ತ್ಯಾಜ್ಯ ವಾಹನಗಳ ಪ್ರಥಮ ಮಹಿಳಾ ಚಾಲಕಿಯಾಗಿ ಗುರುತಿಸಿಕೊಂಡಿರುವ ಲಕ್ಷ್ಮೀ.
ದಿನವೊಂದಕ್ಕೆ ಸರಾಸರಿ 20ರಿಂದ 30 ಕಿ.ಮೀ. ತ್ಯಾಜ್ಯ ವಾಹನ ಓಡಿಸುತ್ತಾರೆ ಲಕ್ಷ್ಮೀ. ಇವರಿಗೆ ಪ್ರಮೀಳಾ ಎಂಬ ಚಾಲಕಿಯೂ ಇದೀಗ ಸಹಕಾರ ನೀಡುತ್ತಿದ್ದಾರೆ. ಗಾಡಿ ಚಾಲನೆ ಜೊತೆಗೆ ಕೃಷಿಯಲ್ಲೂ ಲಕ್ಷ್ಮೀ ತೊಡಗಿಕೊಂಡಿದ್ದಾರೆ.