ಪರೀಕ್ಷಾ ಕೊಠಡಿಯಲ್ಲಿ ವಿದ್ಯುತ್ ಇಲ್ಲದೆ ಮೊಬೈಲ್ ಬ್ಯಾಟರಿ ಬೆಳಕಿನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು !! | ಕಾಲೇಜಿನ ಈ ನಡೆಗೆ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ವ್ಯಾಪಕ ಆಕ್ರೋಶ
ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯುತ್ ಕೈಕೊಟ್ಟ ಕಾರಣ ವಿದ್ಯಾರ್ಥಿಗಳು ಮೊಬೈಲ್ ಫೋನ್ ಬ್ಯಾಟರಿಗಳ ಸಹಾಯದಿಂದ ಪರೀಕ್ಷೆ ಬರೆದಿದ್ದು, ಇದು ಈಗ ವಿವಾದಕ್ಕೆ ಕಾರಣವಾದ ಘಟನೆ ಕೇರಳದ ಸರ್ಕಾರಿ ಮಹಾರಾಜ ಕಾಲೇಜು ಎರ್ನಾಕುಲಂನಲ್ಲಿ ನಡೆದಿದೆ.
ಹಿಂದಿನ ದಿನ ಸುರಿದ ಧಾರಾಕಾರ ಮಳೆಯಿಂದಾಗಿ ಕಾಲೇಜಿನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಬಹುತೇಕ ಪರೀಕ್ಷಾ ಕೊಠಡಿಗಳು ಕತ್ತಲಲ್ಲಿ ಮುಳುಗಿದ್ದವು. ಆಕ್ರೋಶಗೊಂಡ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಯ ಒಳಗೆ ಮೊಬೈಲ್ ಫೋನ್ ನಿಷೇಧಿಸುವ ನಿಯಮವನ್ನು ಉಲ್ಲಂಘಿಸಿ, ಮೊಬೈಲ್ ಫೋನ್ ಬ್ಯಾಟರಿಗಳ ಸಹಾಯದಿಂದ ಪರೀಕ್ಷೆ ಬರೆಯಲು ಮೇಲ್ವಿಚಾರಕರು ಅವಕಾಶ ನೀಡಿದ್ದಾರೆ.
ಒಂದು ಸ್ವಾಯತ್ತ ಕಾಲೇಜಾಗಿ ಎರಡು ಗಂಟೆಗಳ ಕಾಲ ಒಂದೇ ಕೈಯಲ್ಲಿ ಮೊಬೈಲ್ ಬ್ಯಾಟರಿ ಹಿಡಿದುಕೊಂಡು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಬದಲು ಅಧಿಕಾರಿಗಳು ಪರೀಕ್ಷೆ ರದ್ದುಪಡಿಸಿ ಮರುಪರೀಕ್ಷೆ ಘೋಷಿಸಬಹುದಿತ್ತು. ಅಲ್ಲದೆ ಕಾಲೇಜಿನವರು 77 ಲಕ್ಷ ರೂಪಾಯಿ ವೆಚ್ಚದಲ್ಲಿ ಖರೀದಿಸಿದ ವಿದ್ಯುತ್ ಜನರೇಟರ್ನ ಪ್ರಯೋಜನವನ್ನು ಸಹ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಶ್ನಿಸಿದ್ದಾರೆ.
ಪರೀಕ್ಷಾ ಅಧೀಕ್ಷಕರಿಂದ ವಿವರಣೆ ಕೇಳಲಾಗಿದ್ದು, ಅವರು ವಿವರಣೆ ಸಲ್ಲಿಸಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲರಾದ ವಿ ಅನಿಲ್ ಅವರು ತಿಳಿಸಿದ್ದಾರೆ.
ಅಧೀಕ್ಷಕರು ನೀಡಿರುವ ವಿವರಣೆಯ ಬಗ್ಗೆ ಬುಧವಾರ ನಡೆಯುವ ಪರೀಕ್ಷಾ ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು. ಪರೀಕ್ಷೆ ರದ್ದತಿ, ಮೇಲ್ವಿಚಾರಕರ ವಿರುದ್ಧ ಶಿಸ್ತು ಕ್ರಮದಂತಹ ಕ್ರಮಗಳನ್ನು ಸ್ಥಾಯಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಅವರು ಹೇಳಿದ್ದಾರೆ.