ವಿರೋಧದ ನಡುವೆಯೂ ಪದ್ಧತಿ ಮುಂದುವರಿಸಿದ ದೈವಸ್ಥಾನ!! ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ-ಅವರಿಂದಲೇ ಖರೀದಿಸಿದ ತೆಂಗಿನಕಾಯಿಯಲ್ಲಿ ಜಾತ್ರೆಗೆ ದಿನ ಮುಹೂರ್ತ

0 7

ರಾಜ್ಯದೆಲ್ಲೆಡೆ ಹಿಜಾಬ್ ಸಂಘರ್ಷದ ಬಳಿಕ ಹಿಂದೂ ಮುಸ್ಲಿಂ ನಡುವೆ ಅಂತರ ಕಂದಕವೇ ಸೃಷ್ಟಿಯಾಗಿದ್ದು, ಮುಸ್ಲಿಂಮರ ಜೊತೆಗಿನ ವ್ಯವಹಾರದಿಂದ ಹಿಡಿದು ಎಲ್ಲಾ ವಿಚಾರದಲ್ಲೂ ಮುಸ್ಲಿಂಮರನ್ನು ವಿರೋಧಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಹಿಂದೂ ಮುಸ್ಲಿಂ ಭಾಯಿ ಭಾಯಿ ಎನ್ನುವ ಪದವೇ ಮರೆತಂತಿದೆ. ಆದರೆ ದಕ್ಷಿಣ ಕನ್ನಡ-ಕೇರಳ ಗಡಿನಾಡಿನಲ್ಲೊಂದು ದೈವಸ್ಥಾನ ಎಲ್ಲವನ್ನೂ ಮೀರಿ ನಿಂತು ನಾವೆಲ್ಲರೂ ಒಂದೇ ಎನ್ನುವ ಭಾವೈಕ್ಯತೆ ಜೊತೆಗೆ ಸಹೋದರತೆ ಸಾರುತ್ತಾ, ಸಾಮರಸ್ಯದ ಪಾಠ ಮಾಡುತ್ತಿದೆ.

ಹೌದು, ಕಾಸರಗೋಡು ಜಿಲ್ಲೆಯ ಮಂಜೇಶ್ವರ ಉದ್ಯಾವರದಲ್ಲಿ ಇಂತಹ ಘಟನೆಗೆ ಅಲ್ಲಿನ ದೈವ ದೇವರುಗಳು ಸಾಕ್ಷಿಯಾಗಿದ್ದು, ಸ್ವತಃ ದೈವ ಪಾತ್ರಿಯೇ ಮುಸ್ಲಿಂಮರಿಂದ ಖರೀದಿಸಿದ ಎಲೆ ಹಾಗೂ ತೆಂಗಿನಕಾಯಿಯಲ್ಲೇ ಉತ್ಸವಕ್ಕೆ ದಿನ ನಿಗದಿ(ಕುದಿ ಕಳ) ಮಾಡಲಾಗುತ್ತದೆ.

ಇಲ್ಲಿನ ಚರಿತ್ರೆ ಏನು!? ಮಂಜೇಶ್ವರ ಸಮೀಪದ ಉದ್ಯಾವರದ ಶ್ರೀ ಅರಸು ಮಂಜಿಷ್ಣರ್ ಕ್ಷೇತ್ರದಲ್ಲಿ ಇಂತಹದೊಂದು ಸಾಮರಸ್ಯದ ಪದ್ಧತಿ ಪ್ರತೀ ವರ್ಷವೂ ನಡೆದುಬರುತ್ತಿದೆ. ದೇವಾಲಯದ ಸಿಂಹಾಸನದ ಕಟ್ಟೆಯ ಒಂದು ಬದಿಯಲ್ಲಿ ಮುಸ್ಲಿಂ ಸಮುದಾಯ ಹಾಗೂ ಇನ್ನೊಂದು ಭಾಗದಲ್ಲಿ ಕ್ಷೇತ್ರಕ್ಕೆ ಸಂಬಂಧಪಟ್ಟವರು ಕುಳಿತುಕೊಂಡು ಜಾತ್ರೆಗೆ ದಿನ ನಿಗದಿ ಮಾಡುತ್ತಾರೆ. ಮುಸ್ಲಿಂ ವ್ಯಾಪಾರಿಗಳಿಗೆ ನಮ್ಮ ವಿರೋಧವಿಲ್ಲ ಎನ್ನುವ ಇಲ್ಲಿನ ಪದ್ಧತಿಯಂತೆ, ವೀಳ್ಯದೆಲೆ ಹಾಗೂ ತೆಂಗಿನಕಾಯಿಯನ್ನು ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳಿಂದಲೇ ತಂದು ಎಲ್ಲರೂ ಒಟ್ಟಾಗಿ ಸೇರಿ ಜಾತ್ರೆಗೆ ದಿನ ನಿಗದಿ ಮಾಡುತ್ತಾರೆ.

ಬಳಿಕ ದೈವ ಪಾತ್ರಿಗಳೇ ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳಿಗೆ ಬಂದು ತೆಂಗಿನಕಾಯಿ ಖರೀದಿಸಿ ಆಶೀರ್ವದಿಸುತ್ತಾರೆ. ವಿರೋಧದ ನಡುವೆಯೂ ಈ ಬಾರಿ ಹಿಂದಿನದ್ದೇ ಪದ್ಧತಿ ಮುಂದುವರಿಸಲಾಗಿದ್ದು, ಸದ್ಯ ತೆಂಗಿನಕಾಯಿ ಒಡೆಯುವ ಸ್ಪರ್ಧೆ ನಡೆದು ಜಾತ್ರೆ ಸಂಪನ್ನಗೊಂಡಿದೆ.

Leave A Reply