ಅನ್ಯಧರ್ಮದ ವಿಚಾರದಲ್ಲಿ ಕಠಿಣ ಕ್ರಮಕ್ಕೆ ಮುಂದಾದ ಮುಜರಾಯಿ ಇಲಾಖೆ; ಮರುಕಳಿಸಿದ ನಿಯಮ
ಕರ್ನಾಟಕದಲ್ಲಿ ಮುಜರಾಯಿ ಇಲಾಖೆಯು ಕಠಿಣ ಕಾನೂನು ಪಾಲನೆ ಮಾಡಲು ಮುಂದಾಗಿದೆ. ಮುಜರಾಯಿ ದೇಗುಲದ ಅಂಗಡಿಗಳಲ್ಲಿ ಇನ್ನು ಮುಂದೆ ಮುಸ್ಲಿಮರಿಗೆ ಅವಕಾಶ ಇರುವುದಿಲ್ಲ. ವ್ಯಾಪಾರ ಮಳಿಗೆ ಹರಾಜಿನಲ್ಲಿಯೂ ಅನ್ಯಧರ್ಮೀಯರು ಪಾಲ್ಗೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳು (2002)’ ನಿಬಂಧನೆಯ ಪ್ರಕಾರ ಮುಜರಾಯಿ ಇಲಾಖೆಯು ಹಿಂದೂ ಧರ್ಮಕ್ಕೆ ಸೇರದವರಿಗೆ ಮುಜರಾಯಿ ಮಳಿಗೆಗಳನ್ನು ನೀಡುವುದಿಲ್ಲ ಎಂಬ ನಿಲುವು ತಳೆದಿದೆ. 2002ರಲ್ಲಿ ಜಾರಿಯಾದ ಈ ನಿಯಮಗಳ 12ನೇ ಅಂಶವು, ‘ಸಂಸ್ಥೆಯ ಸಮೀಪದ ಜಮೀನು, ಕಟ್ಟಡ ಅಥವಾ ನಿವೇಶನಗಳೂ ಸೇರಿದಂತೆ ಯಾವುದೇ ಸ್ವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆಗೆ ಕೊಡುವಂತಿಲ್ಲ’ ಎಂದು ಹೇಳುತ್ತದೆ. 2002ರಿಂದಲೂ ಈ ನಿಯಮಗಳು ಅಸ್ತಿತ್ವದಲ್ಲಿದ್ದರೂ ಕಟ್ಟುನಿಟ್ಟಿನ ಜಾರಿಗೆ ಸರ್ಕಾರ ಒತ್ತು ನೀಡಿರಲಿಲ್ಲ.
ಇದೀಗ ಮುಜರಾಯಿ ಇಲಾಖೆಯ ಹಳೆಯ ನಿಯಮವನ್ನು ಜಾರಿಗಳಿಸಲು ಮುಂದಾಗಿದೆ. ಈಗ ಮಳಿಗೆಯನ್ನು ಅನ್ಯಧರ್ಮೀಯರಿಗೆ ನೀಡುವ ದೇಗುಲಗಳ ಕಾರ್ಯನಿರ್ವಹಣಾಧಿಕಾರಿಯನ್ನು ಅಮಾನತುಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಹರಾಜಿನಲ್ಲಿ ಅಂಗಡಿ ತೆಗೆದುಕೊಂಡವರೇ ವ್ಯಾಪಾರ ಮಾಡಬೇಕು. ಇತರ ಅನ್ಯಧರ್ಮೀಯರಿಗೆ ಉಪ-ಗುತ್ತಿಗೆ ಕೊಡುವಂತಿಲ್ಲ. ಒಂದು ವೇಳೆ ಹರಾಜಿನಲ್ಲಿ ಪಡೆದ ಅಂಗಡಿಯನ್ನು ಉಪ-ಗುತ್ತಿಗೆ ನೀಡಿದರೆ ಮಂಜೂರು ಆದೇಶವನ್ನೇ ಅಮಾನತು ಮಾಡಲಾಗುವುದು ಎಂದು ಕಟ್ಟುನಿಟ್ಟಾಗಿ ಹೇಳಿದೆ.