ಯು ಟಿ ಖಾದರ್ ಆಪ್ತ ಸಂಬಂಧಿಕರ HONEST ಬಸ್ ಮೇಲೆ RTO ರೈಡ್, ವಶಕ್ಕೆ | ನಿಮ್ಮ ಸುತ್ತ ಹಬ್ಬಿಕೊಂಡ ಕ್ಯಾಕಸ್ ಕತ್ತರಿಸಿಕೊಳ್ಳಿ ಮಿಸ್ಟರ್ ಖಾದರ್ !

ಪ್ರತಿದಿನ ವಿಟ್ಲ ಬಸ್ ನಿಲ್ದಾಣದಿಂದ ಪ್ರಯಾಣಿಕರ ಹೊತ್ತು ಪೆರ್ಲ,ಪಾಣಾಜೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಒಂದನ್ನು ಆರ್.ಟಿ.ಓ ಅಧಿಕಾರಿಗಳು ವಶಕ್ಕೆ ಪಡೆದು, ತಪಾಸಣೆ ನಡೆಸಿದಾಗ ಪರವಾನಗಿ ಇಲ್ಲದಿರುವುದು ಕಂಡುಬದಿರುವುದರಿಂದ ಬಸ್ ನ್ನು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆಯು ಕೆಲ ದಿನಗಳ ಹಿಂದೆ ವಿಟ್ಲದಲ್ಲಿ ನಡೆದಿದೆ.

ದಕ್ಷ ಅಧಿಕಾರಿ ಚರಣ್ ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯ ಸಂದರ್ಭ ಪರವಾನಗಿ ಸಹಿತ ತೆರಿಗೆ ಪಾವತಿಸದಿರುವುದು ಕಂಡುಬಂದಿದೆ. ಹೋನೆಸ್ಟ್ ಎಂಬ ಹೆಸರಿನ ಬಸ್ಸು ಕೆಲ ತಿಂಗಳುಗಳಿಂದ ತೆರಿಗೆ ಪಾವತಿಸದೆ ರಾಜಾರೋಷವಾಗಿ ಸಂಚರಿಸುತ್ತಿತ್ತು.
ತನಿಖೆಯ ವೇಳೆ ಸದರಿ ಬಸ್ಸು ಮಾನ್ಯ ವಿಧಾನಸಭಾ ವಿಪಕ್ಷ ಉಪನಾಯಕ ಯು. ಟಿ ಖಾದರ್ ಅವರ ಸಂಬಂಧಿಯಾದ ಮೊಹಮ್ಮದ್ ಇಕ್ಬಾಲ್ ಮಾಲೀಕತ್ವದ ಬಸ್ ಎಂದು ತಿಳಿದು ಬಂದಿದ್ದು, ಅದರಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ವಿಚಾರ ಬೆಳಕಿಗೆ ಬರುತ್ತಿದ್ದಂತೆ ಬೆಚ್ಚಿ ಬಿದ್ದಿದ್ದಾರೆ. ಪರವಾನಗಿ ಇಲ್ಲದ ಬಸ್ ನಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.

ಬಸ್ ಮಾಲೀಕ ಮೊಹಮ್ಮದ್ ಇಕ್ಬಾಲ್

ಮಹಾನ್ ಸಾಚಾ ಥರ ಫೋಸು ಕೊಡುವ, ಸರ್ವ ಧರ್ಮ ಸಮನ್ವಯದ ಹರಿಕಾರನಂತೆ ತೋರ್ಪಡಿಸಿಕೊಳ್ಳುವ, ಊರಿಡೀ ಬುದ್ದಿ ಹೇಳುವ ಶಾಸಕರು ತಮ್ಮ ಆಪ್ತ ವರ್ಗಕ್ಕೆ ತಮ್ಮವರಿಗೆ ಕಾನೂನು ಪಾಲನೆಗೆ ತಿಳಿಸಲಿಲ್ಲವೇ!? ಅಥವಾ ಏನೇ ಮಾಡಿದರೂ ತಮ್ಮವರನ್ನು ತಾನು ಬಚಾವ್ ಮಾಡುತ್ತೇನೆ ಎನ್ನುವ ಭರವಸೆ ಸಿಕ್ಕಿದೆಯೇ ಎನ್ನುವ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಸದ್ಯ ಬಸ್ ಮಾಲೀಕ ಎಲ್ಲಾ ವಿಚಾರ ಅರಿತಿದ್ದರೂ ಜನರ ಜೀವದ ಜೊತೆ ಚೆಲ್ಲಾಟ ಆಡಿರುವುದು ಖಂಡನೀಯ. ಜತೆಗೆ ಯು.ಟಿ ಖಾದರ್ ಅವರ ಜತೆ ಸದರಿ ಬಸ್ ಮಾಲಕರ ಫೋಟೊಗಳು ವೈರಲ್ ಆಗಿವೆ. ಇಂತಹ ಎಲ್ಲಾ ವಾಹನಗಳನ್ನು ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಅಧಿಕಾರಿಗಳಲ್ಲಿ ವಿನಂತಿಸಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಮಾನ್ಯ ಯು ಟಿ ಖಾದರ್ ಅವರಿಗೆ ಒಂದು ಅತ್ಯಂತ ಸಣ್ಣ ಮಟ್ಟದ ಟೀಕೆಯನ್ನು ಕೆಲ ಪತ್ರಿಕೆಗಳು ಮಾಡಿದ್ದವು. ಕ್ರಿಯಾತ್ಮಕ ಟಿಪ್ಪಣಿಗಳನ್ನು ಕೂಡಾ ಜೀರ್ಣಿಸಿಕೊಳ್ಳಲಾರದ ಶಾಸಕರು ಲೋಕಲ್ ಪತ್ರಿಕೆಗಳ ಮೇಲೆ ಜಿಲ್ಲೆಯಲ್ಲಿ ಮತ್ತು ರಾಜ್ಯ ರಾಜಧಾನಿಯಲ್ಲಿ ದೂರು ದಾಖಲಿಸಿ ತಮ್ಮ ಸಣ್ಣತನ ಪ್ರದರ್ಶಿಸಿದ್ದಾರೆ. ಪತ್ರಿಕೆಗಳು ಇರುವುದು, ಅವರ ಕುರಿತ ಸುದ್ದಿಯನ್ನು ಬಿತ್ತರಿಸಲು ಮತ್ತು ಹೊಗಳಿಕೆಗೆ ಮಾತ್ರ ಎಂದು ಅವರು ನಂಬಿದಂತಿದೆ ಮಾನ್ಯ ಮುಖಂಡರು ಮತ್ತು ಅವರ ಚೇಲಾಗಳು. ದಯವಿಟ್ಟು ನಿಮ್ಮ ಸುತ್ತ ಕ್ಯಾಕಸ್ ಬೆಳೆಯದಂತೆ ನೋಡಿಕೊಳ್ಳಿ ಮಿಸ್ಟರ್ ಖಾದರ್. ಪ್ರಜ್ಞಾವಂತರ ಸಲಹೆ ಮಾತ್ರ ಸ್ವೀಕರಿಸಿ. ಇಂತಹಾ ಕಾನೂನು ಮೀರುವ ಕೈಗಳನ್ನು, ಅವರು ಸಂಬಂಧಿಕರೇ ಆಗಿರಲಿ, ಹತ್ತಿರಕ್ಕೆ ಸೇರಿಸಿಕೊಳ್ಳಬೇಡಿ. ಇದು ಸಾರ್ವಜನಿಕರ ಸಣ್ಣ ವಿನಂತಿ, ಅಷ್ಟೇ.

Leave A Reply

Your email address will not be published.