ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ
ಭಾರತೀಯ ವಿದ್ಯಾರ್ಥಿಯನ್ನು ಕೆನಡಾದ ಟೊರೊಂಟೋ ಸಬ್ ವೇನ ಪ್ರವೇಶದ್ವಾರದಲ್ಲೇ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾದ ಅಮಾನವೀಯ ಘಟನೆ ನಡೆದಿದೆ.
21 ವರ್ಷದ ಕಾರ್ತಿಕ್ ವಾಸುದೇವ್ ಗುಂಡಿನ ದಾಳಿಯಿಂದ ಮೃತಪಟ್ಟವರಾಗಿದ್ದಾರೆ.
ಈತನ ಮೇಲೆ ಹಲವು ಸುತ್ತಿನ ಗುಂಡಿನ ದಾಳಿ ನಡೆದಿದ್ದು,ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ರೂ ಪ್ರಯೋಜನವಾಗಲಿಲ್ಲ.ಘಟನೆ ನಡೆದ ಸ್ಥಳದಲ್ಲಿ ಇರುವ ಕ್ಯಾಮರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು,ಪ್ರತ್ಯಕ್ಷದರ್ಶಿಗಳನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.ಆದರೆ,ಭಾರತೀಯ ವಿದ್ಯಾರ್ಥಿಯನ್ನು ಗುಂಡಿಕ್ಕಿ ಕೊಲ್ಲಲು ಕಾರಣ ಏನೆಂಬುದು ತಿಳಿದುಬಂದಿಲ್ಲ. ಅಲ್ಲದೆ ಈ ಕೃತ್ಯ ಎಸಗಿದವರು ಯಾರೆಂಬ ಸುಳಿವು ಸಿಕ್ಕಿಲ್ಲ.
ಭಾರತೀಯ ವಿದ್ಯಾರ್ಥಿಯನ್ನು ಹತ್ಯೆಗೈದಿರುವುದು ಅತ್ಯಂತ ಆಘಾತಕಾರಿ ಮತ್ತು ದುರದೃಷ್ಟಕರವೆಂದು ಟೊರೊಂಟೋದಲ್ಲಿರು ಭಾರತದ ಕಾನ್ಸುಲೇಟ್ ಅಧಿಕಾರಿ ವಿಷಾದ ವ್ಯಕ್ತಪಡಿಸಿದ್ದಾರೆ. ಕಾರ್ತಿಕ್ ಮೃತದೇಹವನ್ನು ಕುಟುಂಬಸ್ಥರಿಗೆ ತಲುಪಿಸಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಟೊರೊಂಟೊದಲ್ಲಿ ಭಾರತೀಯ ವಿದ್ಯಾರ್ಥಿಯ ಹತ್ಯೆಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಂತಾಪ ವ್ಯಕ್ತಪಡಿಸಿದ್ದು,ಈ ದುರಂತ ಘಟನೆಯಿಂದ ದುಃಖಿತನಾಗಿದ್ದೇನೆ ಎಂದು ಟ್ವೀಟ್ ಮಾಡಿರೋ ಅವರು, ಕಾರ್ತಿಕ್ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.