ಅನ್ಯಕೋಮಿನ ಯುವಕರಿಂದ ಮೂರು ಕಡೆ ಮೊಟ್ಟೆ ದಾಳಿ | ದೇವಸ್ಥಾನದ ಬ್ರಹ್ಮಕಲಶೋತ್ಸವ ಇರುವಾಗಲೇ ನಡೆದ ಅಹಿತಕರ ಘಟನೆ !
ಪ್ರಸಿದ್ಧ ಚನ್ನಪಟ್ಟಣ ಹನುಮಂತ ದೇವಸ್ಥಾನದ ಬ್ರಹ್ಮ ರಥೋತ್ಸವ ನಾಳೆ (ಭಾನುವಾರ) ನಡೆಯಲಿದ್ದು, ಈ ಸಂದರ್ಭದಲ್ಲಿ ಅನ್ಯಕೋಮಿನ ಯುವಕರಿಂದ ಅಹಿತಕರ ಘಟನೆಯೊಂದು ನಡೆದಿದ್ದು, ಭಟ್ಕಳದಂತ ಸೂಕ್ಷ್ಮ ಪ್ರದೇಶದಲ್ಲಿ ಶಾಂತಿ ಕೆದಡುವ ಪ್ರಯತ್ನ ಎಂದುಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಘಟನೆ ವಿವರ : ಅನ್ಯಕೋಮಿನ ಯುವಕರ ಗುಂಪೊಂದು ಬೈಕ್ ಮೇಲೆ ಬಂದು ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಮೊಟ್ಟೆಯನ್ನು ಎಸೆದು ದಾಳಿ ಮಾಡಿ ವಿಕೃತಿ ಮೆರೆದಿರುವ ಘಟನೆ ಉತ್ತರಕನ್ನಡ ಜಿಲ್ಲೆ ಮಣ್ಕುಳಿಯ ರಾಘವೇಂದ್ರಸ್ವಾಮಿ ಮಠದ ಬಳಿ ನಡೆದಿದೆ.
ಈ ವೇಳೆ ಓರ್ವ ಆರೋಪಿ ಸಿಕ್ಕಿ ಬಿದ್ದಿದ್ದು, ಸಾರ್ವಜನಿಕರು ಧರ್ಮದೇಟು ನೀಡಿದ ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ತಾಲೂಕಿನ ಹೆಬಳೆ ಗಾಂಧಿನಗರ, ಹನುಮಾನ ನಗರ ಹಾಗೂ ಪುರವರ್ಗದಲ್ಲಿ ಮೊಟ್ಟೆ ದಾಳಿ ಮಾಡಿ ಯುವಕರು ವಿಕೃತಿ ಮೆರೆದಿದ್ದಾರೆ. ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಂಧಿನಗರದಲ್ಲಿ ಮೊದಲು ಮೂರು ಬೈಕ್ ಮೇಲೆ ಬಂದ ಆರು ಜನ ಅನ್ಯ ಕೋಮಿನ ಯುವಕರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಓರ್ವನ ಮೇಲೆ ಮೊಟ್ಟೆ ದಾಳಿ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ.
ಇಷ್ಟಾದ ಮೇಲೆ ಅನ್ಯಕೋಮಿನ ಅದೇ ಯುವಕರು ಹನುಮಾನ್ ನಗರದಲ್ಲಿ ಊಟದ ಬಳಿಕ ರಾತ್ರಿ ವಾಕಿಂಗ್ ಮಾಡುತ್ತಿದ್ದ ಓರ್ವರ ಮೇಲೆ ಎದೆ ಭಾಗಕ್ಕೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಅಲ್ಲಿಂದ ಯುವಕರು ನಂತರ ತಾಲೂಕಿನ ಪುರವರ್ಗದಲ್ಲಿ ಮತ್ತೆ ಬಂದು ಮನೆ ಪಕ್ಕದಲ್ಲಿದ್ದ ಬೇಕರಿಗೆ ಹೋಗಿ ಬರುತ್ತಿದ್ದ ಯುವಕನ ಮೇಲೆ ಮತ್ತೆ ಮೊಟ್ಟೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಗಮನಿಸಿದ ಹಲ್ಲೆಗೊಳಗಾದ ಯುವಕನ ಸಹೋದರ ತಕ್ಷಣವೇ ತನ್ನ ಕಾರನ್ನು ತೆಗೆದುಕೊಂಡು ಮೂರು ಬೈಕ್‌ನ್ನು ಹಿಂಬಾಲಿಸಿ ಕೊಂಡು ಹೋಗಿದ್ದಾನೆ. ನಂತರ ಮಣ್ಕುಳಿಯ ರಾಘವೇಂದ್ರಸ್ವಾಮಿ ಮಠದ ಸಮೀಪ ಇಬ್ಬರು ಯುವಕರನ್ನು ಹಿಂಬಾಲಿಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸಾರ್ವಜನಿಕರು ಜಮಾಯಿಸುವಷ್ಟರಲ್ಲಿ ಓರ್ವ ಯುವಕ ತಪ್ಪಿಸಿಕೊಂಡು ಪರಾರಿಯಾಗಿದ್ದು, ಸಿಕ್ಕಿಬಿದ್ದ ಇನ್ನೋರ್ವ ಯುವಕನಿಗೆ ಥಳಿಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿ ಪೊಲೀಸರು ಸಾರ್ವಜನಿಕರನ್ನು ಸಮಾಧಾನಪಡಿಸಿ ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಸಾರ್ವಜನಿಕರು ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಉಳಿದೆಲ್ಲ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡಿದ್ದಾರೆ.
ಆಕ್ರೋಶಗೊಂಡ ಜನರನ್ನು ನಿಯಂತ್ರಿಸುವಲ್ಲಿ ಪೊಲೀಸರಿಗೆ ಸಾಕುಸಾಕಾಗಿತ್ತು. ಈ ಘಟನೆಯಿಂದಾಗಿ ತಾಲೂಕಿನಾದ್ಯಂತ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಡಿವೈಎಸ್‌ಪಿ ಬೆಳ್ಳಿಯಪ್ಪ ತಿಳಿಸಿದ್ದಾರೆ.