ಮಾನವ ಕಳ್ಳ ಸಾಗಾಣಿಕೆ: ಕೆಲಸದ ಆಮಿಷ ಒಡ್ಡಿ ದುಬೈ ಡ್ಯಾನ್ಸ್ ಬಾರ್ ಗಳಿಗೆ, ಅನೈತಿಕ ಚಟುವಟಿಕೆಗಳಿಗೆ ರವಾನಿಸುತ್ತಿದ್ದ ತಂಡ ಪೊಲೀಸರ ಬಲೆಗೆ!!!
ಬೆಂಗಳೂರು : ವಿದೇಶದಲ್ಲಿ ಉದ್ಯೋಗದ ಆಮಿಷ ತೋರಿಸಿ ದುಬೈನ ಡ್ಯಾನ್ಸ್ ಬಾರ್ಗಳಿಗೆ
ಯುವತಿಯರನ್ನು ಸಾಗಿಸುತ್ತಿದ್ದ ಮಾನವ ಕಳ್ಳ ಸಾಗಾಣಿಕೆ ಜಾಲವೊಂದನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಈವೆಂಟ್ ಮ್ಯಾನೇಜ್ಮೆಂಟ್ ಆಯೋಜಕ, ಡಿಜೆ ಹಾಗೂ ಆರ್ಟಿಸ್ಟ್ ಏಜೆಂಟ್ ಸೇರಿದಂತೆ ಏಳು ಮಂದಿಯನ್ನು ವಶಪಡಿಸಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ನಿಖರ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಸಿಸಿಬಿಯ ಮಹಿಳಾ ಸುರಕ್ಷತಾ ದಳದ ಇನ್ಸ್ಪೆಕ್ಟರ್ ಹಜರೇಶ್ ಕಿಲ್ಲೇದಾರ್ ನೇತೃತ್ವದ ತಂಡವು, ಮೊಬೈಲ್ ಕರೆಗಳು ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಮಾನವ ಕಳ್ಳ ಸಾಗಾಣಿಕೆ ಜಾಲದ ಏಳು ಮಂದಿ ಸದಸ್ಯರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಏಳು ಮಂದಿ ಆರೋಪಿಗಳು ಚಲನಚಿತ್ರಗಳಿಗೆ ಸಹನಟ-ನಟಿಯರು, ನೃತ್ಯಗಾರರನ್ನು ಪೂರೈಸುವ ವ್ಯವಹಾರ ಮತ್ತು ಮನರಂಜನಾ ಕಾರ್ಯಕ್ರಮಗಳ ಆಯೋಜನೆ ದಂಧೆ ಮಾಡುತ್ತಿದ್ದರು. ಬಡತನದ ಹಿನ್ನೆಲೆಯ ಯುವತಿಯರನ್ನು ಪರಿಚಯ ಮಾಡಿಕೊಂಡು ಅವರಿಗೆ ವಿದೇಶದಲ್ಲಿ ಕೆಲಸಕ್ಕೆ ಸೇರಿಸಿದರೆ ಕೈ ತುಂಬಾ ಸಂಪಾದನೆ ಮಾಡಬಹುದು ಎಂದು ಆಮಿಷವೊಡ್ಡುತ್ತಿದ್ದರು. ತಮ್ಮ ಮಾತಿಗೆ ಒಪ್ಪಿದ ಯುವತಿಯರಿಗೆ ದುಬೈನಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಹೇಳಿ ಕಳುಹಿಸುತ್ತಿದ್ದರು. ಬಳಿಕ ದುಬೈನಲ್ಲಿ ಡ್ಯಾನ್ಸ್ ಬಾರ್ ಕೆಲಸಗಳಿಗೆ ಮಾತ್ರವಲ್ಲದೆ ಅನೈತಿಕ ಚಟುವಟಿಕೆಗಳಿಗೆ ಆ ಮಹಿಳೆಯರನ್ನು ಬಳಸಿಕೊಳ್ಳುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಒಬ್ಬೊಬ್ಬ ಯುವತಿಗೆ ಆರೋಪಿಗಳು 25 ರಿಂದ 30 ಸಾವಿರ ಹಣ ದುಬೈನ ವ್ಯಕ್ತಿಗಳಿಂದ ಸಂದಾಯವಾಗುತ್ತಿತ್ತು. ಅಲ್ಲದೆ, ಮೊದಲ ಬಾರಿಗೆ ದುಬೈ ತೆರಳುವ ಯುವತಿಯರಿಂದ ಸಹ ಈ ಆರೋಪಿಗಳು ಪಾಸ್ ಪೋರ್ಟ್ ಖರ್ಚು ವೆಚ್ಚ ಎಂದು ಹೇಳಿ ಮುಂಗಡವಾಗಿ 50 ರಿಂದ 75 ಸಾವಿರ ವರೆಗೆ ಪಡೆಯುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಮಾನವ ಕಳ್ಳ ಸಾಗಾಣಿಕೆ ಜಾಲವು ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಕೃತ್ಯ ನಡೆಯುತ್ತಿತ್ತು. ಚಲನಚಿತ್ರಗಳ ಸಹ ಕಲಾವಿದರು ಹಾಗೂ ನೃತ್ಯಗಾರ್ತಿಯರನ್ನು ಗುರಿಯಾಗಿಸಿ ಆರೋಪಿಗಳು ಗಾಳ ಹಾಕಿದ್ದಾರೆ. ಇವರಿಗೆ ವಿದೇಶದ ವ್ಯಕ್ತಿಗಳ ಜೊತೆ ನಿರಂತರ ಸಂಪರ್ಕವಿತ್ತು ಎಂದು ಪೊಲೀಸರು ಹೇಳಿದ್ದಾರೆ.