ಸ್ಟೇಷನ್ ನಲ್ಲಿ ಪತ್ರಕರ್ತರು ಸೇರಿದಂತೆ 8 ಜನರನ್ನು ಅರೆಬೆತ್ತಲೆ ಮಾಡಿ ನಿಲ್ಲಿಸಿದ ಪೊಲೀಸರು!
ಪತ್ರಕರ್ತ ಮತ್ತು ರಂಗಭೂಮಿ ಕಲಾವಿದರು ಒಳಗೊಂಡ ಗುಂಪೊಂದನ್ನು ಪೊಲೀಸ್ ಠಾಣೆಯೊಳಗೆ ಬಟ್ಟೆ ಬಿಚ್ಚಿಸಿ ಒಳ ಉಡುಪಿನಲ್ಲಿ ನಿಲ್ಲಿಸಿ, ಕೇವಲವಾಗಿ ನಡೆಸಿಕೊಂಡು ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಂಟು ಮಂದಿ ತಮ್ಮ ಕೈಗಳನ್ನು ಕಟ್ಟಿಕೊಂಡು ಅರಬೆತ್ತಲೆಯಾಗಿ ಗೋಡೆಯ ಮುಂದೆ ನಿಂತಿರುವ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳೀಯ ಬಿಜೆಪಿ ಶಾಸಕರ ವಿರುದ್ಧ ನಡೆದ ಪ್ರತಿಭಟನೆಯನ್ನು ವರದಿ ಮಾಡಲು ಹೋದಾಗ ಕೆಲವು ಪೊಲೀಸ್ ಸಿಬ್ಬಂದಿ ನಿಂದಿಸಿದ್ದಲ್ಲದೆ, ಥಳಿಸಿ, ವಿವಸ್ತ್ರಗೊಳಿಸಿದರು ಎಂದು ಫೋಟೋದಲ್ಲಿ ಗುರುತಿಸಲಾದ ಸ್ಥಳೀಯ ಪತ್ರಕರ್ತ ಮತ್ತು ಯೂಟ್ಯೂಬರ್ ಆರೋಪ ಮಾಡಿದ್ದಾರೆ.
ಈ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಕಳೆದ ಶನಿವಾರ ನಡೆದಿದೆ. ಬಿಜೆಪಿ ಶಾಸಕ ಕೇದಾರನಾಥ್ ಶುಕ್ಲಾ ಮತ್ತು ಅವರ ಪುತ್ರ ಗುರುದತ್ ಶುಕ್ಲಾ ವಿರುದ್ಧ ರಂಗಭೂಮಿ ಕಲಾವಿದ ನೀರಜ್ ಕುಂದರ್ ಎಂಬಾತ ಅಸಭ್ಯ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಬಂಧಿಸಿದ್ದಾರೆ. ಈ ನಡೆಯನ್ನು ಖಂಡಿಸಿ ನಡೆದ ಪ್ರತಿಭಟನೆಯನು ವರದಿ ಮಾಡಲು ಪತ್ರಕರ್ತರು ಹೋದಾಗ ಪೊಲೀಸರು ದುರ್ವತನೆ ತೋರಿದ್ದಾರೆ ಎಂದು ಪತ್ರಕರ್ತ ಗಂಭೀರ ಆರೋಪ ಮಾಡಿದ್ದಾರೆ.
ಫೋಟೋದಲ್ಲಿರುವವರನ್ನು 18 ಗಂಟೆಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇಡಲಾಗಿತ್ತು ಎಂದು ಹೇಳಲಾಗಿದೆ. ಪೊಲೀಸರು ಏಪ್ರಿಲ್ 2 ರ ರಾತ್ರಿ 8 ಗಂಟೆಗೆ ನಮ್ಮನ್ನು ಕಸ್ಟಡಿಗೆ ತೆಗೆದುಕೊಂಡು ಮತ್ತು ಏಪ್ರಿಲ್ 3 ರಂದು ಸಂಜೆ 6 ಗಂಟೆಗೆ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.