ಇಡೀ ತಾಲೂಕಿನಲ್ಲೇ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ಓರ್ವ ವಿದ್ಯಾರ್ಥಿನಿ!!ಆಕೆಯ ಪರೀಕ್ಷಾ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದು ಬರೋಬ್ಬರಿ 23 ಸಿಬ್ಬಂದಿ!!
ಒಬ್ಬ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಸುಮಾರು 23 ಮಂದಿ ಸಿಬ್ಬಂದಿಗಳು ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ ಹಾಗೂ ಇಡೀ ತಾಲೂಕಿನಲ್ಲೇ ಒಂದು ನಿರ್ಧಿಷ್ಟ ವಿಷಯದಲ್ಲಿ ಒಬ್ಬಳೇ ಒಬ್ಬ ಪರೀಕ್ಷಾರ್ಥಿ ಪರೀಕ್ಷೆ ಬರೆದ ವಿಶೇಷ ಘಟನೆಯೊಂದು ಚನ್ನಪಟ್ಟಣದ ಎಸ್.ಎಸ್.ಎಲ್. ಸಿ ಪರೀಕ್ಷಾ ಕೇಂದ್ರವೊಂದರಲ್ಲಿ ನಡೆದಿದೆ.
ಎಲ್ಲರಂತೆ ಗಣಿತ ಮತ್ತು ವಿಜ್ಞಾನ ಪಠ್ಯದಲ್ಲಿ ವಿಶೇಷ ಚೇತನ ವಿದ್ಯಾರ್ಥಿಗಳು ದೌರ್ಬಲ್ಯರಾಗಿರುವುದರಿಂದ, ಅಂತಹ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಮಂಡಳಿಯು ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರ ವಿಷಯವನ್ನು ನೀಡುವ ನಿಯಮ ರೂಪಿಸಿದ್ದು, ಅದರಂತೆ ಇಲ್ಲಿನ ವಿಶೇಷ ಚೇತನ ವಿದ್ಯಾರ್ಥಿಯೋರ್ವಳು ಅರ್ಥಶಾಸ್ತ್ರ ವಿಷಯದಲ್ಲಿ ಪರೀಕ್ಷೆ ಬರೆದಿದ್ದು, ಇಡೀ ತಾಲೂಕಿನಲ್ಲೇ ಈಕೆ ಮಾತ್ರ ಪರೀಕ್ಷೆ ಬರೆದುದಲ್ಲದೇ, ಒಬ್ಬಳಿಗಾಗಿ 23 ಸಿಬ್ಬಂದಿಗಳು ಪರೀಕ್ಷಾ ಕೇಂದ್ರದ ಕರ್ತವ್ಯ ನಿರ್ವಹಿಸಿದ್ದು ವಿಶೇಷವಾಗಿತ್ತು.
ಪರೀಕ್ಷಾ ಕೇಂದ್ರದ ನಿಯಮಗಳ ಪ್ರಕಾರ ಒಂದು ಎಕ್ಸಾಮ್ ಹಾಲ್ ನಲ್ಲಿ ಕೊಠಡಿ ಮೇಲ್ವಿಚಾರಕರು, ಪರೀಕ್ಷಾ ಕೇಂದ್ರ ಮೇಲ್ವಿಚಾರಕರು,ಭದ್ರತೆಗಾಗಿ ಪೋಲಿಸ್ ಸಿಬ್ಬಂದಿ, ಪ್ರಶ್ನೆ ಪತ್ರಿಕೆ ಸಂಗ್ರಹಿಸಲು, ವಿತರಿಸಲು ಹಾಗೂ ಖಜಾನೆಯಲ್ಲಿ ಸಿಬ್ಬಂದಿಗಳು ಅಗತ್ಯವಾಗಿ ಇರಬೇಕು. ಪರೀಕ್ಷಾರ್ಥಿಗಳ ಸಂಖ್ಯೆ ಒಂದು ಅಥವಾ ಅದಕ್ಕಿಂತ ಹೆಚ್ಚಿದ್ದರೂ ಈ ಸಿಬ್ಬಂದಿಗಳು ತಮ್ಮ ಕರ್ತವ್ಯ ನಿರ್ವಹಿಸಬೇಕಾಗಿದೆ.ಸದ್ಯ ಈಕೆ ಪರೀಕ್ಷೆ ಬರೆದ ಸುದ್ದಿ ರಾಜ್ಯದೆಲ್ಲೆಡೆ ಸದ್ದು ಮಾಡಿರುವುದರೊಂದಿಗೆ, ಶಿಕ್ಷಣ ಇಲಾಖೆಯ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.