ನನಗ್ಯಾರೋ ವಾಮಾಚಾರ ಮಾಡಿಸಿದ್ದಾರೆ,ಪ್ರೇತಾತ್ಮಗಳು ಮೈಮೇಲೆ ಬರುತ್ತವೆ ಎಂದು ಪೊಲೀಸ್ ಠಾಣೆಗೆ ಪತ್ರ ಬರೆದ ಯುವಕ!!
ಆಸ್ತಿ-ಪಾಸ್ತಿ ವಿಚಾರವಾಗಿ ಜಗಳ, ಕೊಲೆ-ದರೋಡೆ, ಕಳ್ಳತನ ಹೀಗೆ ವಿವಿಧ ಕಾರಣಗಳಿಗೆ ಪೊಲೀಸ್ ಠಾಣೆಗೆ ತೆರಳುತ್ತೇವೆ. ಇತ್ತೀಚೆಗೆ ತನ್ನ ದನ ಹಾಲು ಕೊಡುವುದಿಲ್ಲವೆಂದು ರೈತ ಪೊಲೀಸ್ ಠಾಣೆ ಮುಂದೆಯೇ ದನವನ್ನು ಕಟ್ಟಿದ್ದನ್ನು ನೋಡ್ದಿದ್ದೇವೆ. ಅಷ್ಟೇ ಯಾಕೆ ನಾಯಿ, ಬೆಕ್ಕು ಕಾಣುತ್ತಿಲ್ಲವೆಂದು ದೂರು ನೀಡಿದ್ದು ಇದೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಲು ಕಾರಣ ಏನೆಂಬುದು ಇದಕ್ಕೆಲ್ಲದಕ್ಕೂ ವಿಭಿನ್ನವಾಗಿದೆ.
ಪೊಲೀಸ್ ಠಾಣೆ ಮೆಟ್ಟಿಲೇರಿರುವ ಈ ಯುವಕನ ಹೆಸರು ವೀರಯ್ಯ ಹಿರೇಮಠ. 30 ವರ್ಷದ ವೀರಯ್ಯ ಹಿರೇಮಠ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಾಲ್ವೆಕಲ್ಲಾಪುರ ಗ್ರಾಮದ ಯುವಕ. ಪಿಯುಸಿ ಓದಿಕೊಂಡಿರುವ ವೀರಯ್ಯ ಹಿರೇಮಠಗೆ ಯಾರೋ ವಾಮಾಚಾರ ಮಾಡಿಸಿದ್ದಾರಂತೆ. ಹೀಗಾಗಿ ತನಗೆ ರಾತ್ರಿಯೆಲ್ಲ ನಿದ್ದೆಯಿಲ್ಲ. ಮೈ-ಕೈ, ಕಾಲುಗಳ ನೋವು ಕಾಣಿಸಿಕೊಳ್ಳುತ್ತೆ. ಪ್ರೇತಾತ್ಮಗಳು ಮೈಮೇಲೆ ಬರುತ್ತವೆ ಅಂತಾ ಆಡೂರು ಪೊಲೀಸ್ ಠಾಣೆಯ ಪಿಎಸ್ಐಗೆ ವೀರಯ್ಯ ಪತ್ರ ಬರೆದಿದ್ದಾನೆ. ತನಗೆ ಯಾರು ವಾಮಾಚಾರ ಮಾಡಿಸಿದ್ದು, ಅವರನ್ನ ಹಿಡಿದು ಶಿಕ್ಷಿಸುವಂತೆ ವೀರಯ್ಯ ಮನವಿ ಮಾಡಿದ್ದಾನೆ.
ಒಮ್ಮೆ ನೀವು ಮನದೊಳಗೆ ಯೋಚಿಸಿ ನಕ್ಕಿರಬಹುದು, ಈತ ಈ ಸಮಸ್ಯೆಗೆ ಡಾಕ್ಟರ್ ಅನ್ನು ಸಂಪರ್ಕಿಸಬೇಕೇ ಹೊರತು ಪೊಲೀಸರನ್ನು ಅಲ್ಲವೆಂದು. ಆದ್ರೆ ವೀರಯ್ಯ ತನ್ನ ಸಮಸ್ಯೆಗಳ ಕುರಿತಂತೆ ಹಾವೇರಿ,ಶಿಗ್ಗಾವಿ,ಮಣಿಪಾಲ ಹುಬ್ಬಳ್ಳಿ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ತೋರಿಸಿದ್ದಾನೆ. ಅಲ್ಲಿ ಎಲ್ಲಾ ರೀತಿಯ ಪರೀಕ್ಷೆ ಮಾಡಿರುವ ವೈದ್ಯರು ಆತನಿಗೆ ಏನೂ ಆಗಿಲ್ಲ ಎಂದು ತಿಳಿಸಿದ್ದಾರೆ. ನರರೋಗ ವೈದ್ಯರು ಸಹ ವೀರಯ್ಯ ಆರೋಗ್ಯದಿಂದ ಇದ್ದಾನೆ ಎಂದು ತಿಳಿಸಿದ್ದಾರೆ.ಇಷ್ಟೆಲ್ಲಾ ವೈದ್ಯರಿಂದ ಗುಣಮುಖವಾಗದ ಕಾರಣ ಪೋಷಕರು ವೀರಯ್ಯನನ್ನ ಜ್ಯೋತಿಷಿಗಳ ಹತ್ತಿರ ಕರೆದುಕೊಂಡು ಹೋಗಿದ್ದರಂತೆ. ಅವರ ಹತ್ತಿರ ತೋರಿಸಿದ ನಂತರ ಪ್ರೇತಾತ್ಮಗಳ ಕಾಟ ಸ್ವಲ್ಪ ಕಡಿಮೆಯಾಗಿದೆ ಎನ್ನುತ್ತಾನೆ ವೀರಯ್ಯ.
ವೀರಯ್ಯನ ಈ ವರ್ತನೆ ಕುರಿತಂತೆ ಮಾನಸಿಕ ವೈದ್ಯರನ್ನ ಕೇಳಿದರೆ, ವೀರಯ್ಯನ ಲಕ್ಷಣಗಳನ್ನು ನೋಡಿದರೆ ಆತ ಭ್ರಮೆಗೆ ಒಳಗಾಗಿದ್ದಾನೆ. ಇದನ್ನು ಸ್ಕಿಜೋಪೇನಿಯಾ ಎಂದು ಕರೆಯಲಾಗುತ್ತದೆ. ಇದೊಂದು ಧೀರ್ಘಕಾಲದ ಮನೋರೋಗವಾಗಿದ್ದು, ಮಾನಸಿಕ ತಜ್ಞರಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಗುಣಪಡಿಸಬಹುದು ಎಂದಿದ್ದಾರಂತೆ ವೈದ್ಯರು.
ಇಷ್ಟೆಲ್ಲಾ ವೈದ್ಯರು, ಜ್ಯೋತಿಷಿಗಳನ್ನು ಭೇಟಿ ಆದರೂ ಸಮಸ್ಯೆ ನಿಲ್ಲದ ಕಾರಣ ಇಲ್ಲಾದರೂ ಪರಿಹಾರ ಸಿಗಲಿ ಎಂದು ಪೊಲೀಸ್ ಮೊರೆ ಹೋಗಿದ್ದಾನೆ. ಅಂತೂ ಆತನ ಈ ವರ್ತನೆಗೆ ಅಂತ್ಯ ಕಂಡಿತೇ, ಇಲ್ಲವೇ? ವಾಮಾಚಾರ ಮಾಡಿದಾತನಿಗೆ ಶಿಕ್ಷೆ ಆಯಿತೇ ಎಂಬುದು ಒಂದೂ ತಿಳಿದಿಲ್ಲ..