ಹಿಂದೂ ಹುಡುಗಿ,ಮುಸ್ಲಿಂ ಹುಡುಗ ಮದುವೆ ಪ್ರಕರಣ : ಲವ್ ಜಿಹಾದ್ ಕೇಸ್ ಗೆ ಸ್ಫೋಟಕ ತಿರುವು | ಮುತಾಲಿಕ್ ಕೊಟ್ಟ ಗಡುವಿನೊಳಗೆ ಠಾಣೆಗೆ ಬಂದು ಶರಣಾದ ಯುವತಿ
ಲವ್ ಜಿಹಾದ್ ಮೂಲಕ ಹಿಂದು ಸಮಾಜದ ಯುವತಿಯನ್ನು ಬಲೆಗೆ ಬೀಳಿಸಿ, ಮುಸ್ಲಿಂ ಯುವಕ ಮದುವೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ಯುವತಿಯ ಕುಟುಂಬದವರು ಹಾಗೂ ಹಿಂದು ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಉಪನಗರ ಪೊಲೀಸ್ ಠಾಣೆ ಎದುರು ಬುಧವಾರ ದಿಢೀರ್ ಪ್ರತಿಭಟನೆ ನಡೆಸಿದ್ದ ಪ್ರಕರಣಕ್ಕೆ ಇದೀಗ ಮತ್ತೊಂದು ತಿರುವು ಪಡೆದಿದೆ.
‘ನನ್ನನ್ನು ಯಾರೂ ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬಂದಿಲ್ಲ. ನಾನೇ ಪ್ರೀತಿಯಿಂದ ಪ್ರಿಯಕರನ ಜತೆ ಬಂದಿದ್ದೇನೆ’ ಎಂದು ವಿಡಿಯೋ ಹೇಳಿಕೆಯನ್ನು ಯುವತಿ ಕಳಿಸಿದ್ದಾಳೆ. ಬಲವಂತವಾಗಿ ನನ್ನ ಮಗಳಿಂದ ಈ ಹೇಳಿಕೆ ನೀಡಲಾಗಿದೆ ಹಾಗೂ ವಿಡಿಯೋ ಮಾಡಿ ಕಳಿಸಿದ್ದಾರೆ ಎಂದು ಯುವತಿಯ ಪೋಷಕರು ಆರೋಪ ಮಾಡಿದ್ದಾರೆ.
ಕೇಶ್ವಾಪುರ ನಿವಾಸಿ ಇಬ್ರಾಹಿಂ ಸೈಯದ್ ಎಂಬಾತ ಉಣಕಲ್ ನಿವಾಸಿ ಸ್ನೇಹಾ ಡಮಾಮರ ಎಂಬ ಯುವತಿಯನ್ನು ಪುಸಲಾಯಿಸಿ, ಯುಗಾದಿ ಹಬ್ಬದಂದೇ ಕರೆದುಕೊಂಡು ಹೋಗಿದ್ದಾನೆ. ತನ್ನ ಹೆಸರು ಅರುಣ ಎಂದು ಹೇಳಿ ನಾಟಕವಾಡಿ, ಆಕೆಯ ಮತಾಂತರಕ್ಕೆ ಹುನ್ನಾರ ನಡೆಸಿದ್ದಾನೆ.
ಫೆ.11ರಂದು ಸ್ನೇಹಾ ಮನೆಯಲ್ಲೇ ಇದ್ದಳು. ಅಂದು ಗದಗ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನಡೆದಿರುವುದಾಗಿ ಸುಳ್ಳು ದಾಖಲೆ ಸೃಷ್ಟಿ ಮಾಡಿದ್ದಾರೆ. ಇದರಲ್ಲಿ ಕೆಲ ಅಧಿಕಾರಿಗಳ ಕೈವಾಡವಿದೆ ಎಂದು ಪಾಲಕರು ಮತ್ತು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಆರೋಪಿಸಿದ್ದರು.
ಗುರುವಾರ ಮಧ್ಯಾಹ್ನ 12 ಗಂಟೆಯೊಳಗೆ ಸ್ನೇಹಾಳನ್ನು ಕರೆತರುವಂತೆ ಪ್ರತಿಭಟನಾಕಾರರು ಗಡುವು ನೀಡಿದ್ದರು. ಯುವತಿಯ ಪೋಷಕರ ಆಗ್ರಹಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೂಡ ಧ್ವನಿಗೂಡಿಸಿದ್ದರು. ಯುವತಿಯನ್ನು ಗುರುವಾರ ಮಧ್ಯಾಹ್ನ 12 ಗಂಟೆಯೊಳಗೆ ಕರೆತರದಿದ್ದರೆ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಕೊನೆಗೂ ಯುವತಿಯನ್ನು ಕರೆತಂದ ಪೊಲೀಸರು ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.