ಕುಂದಾಪುರ : ಸಮುದ್ರ ತೀರದಲ್ಲಿ ಮದುವೆಯಾದ ಜೋಡಿ| ಸಿಂಪಲ್ ಬಟ್ ರಾಯಲ್ ಮದುವೆಗೆ ಸಾಕ್ಷಿಯಾದ ಪ್ರಕೃತಿ
ಮದುವೆ ಎನ್ನುವುದು ಎಲ್ಲರ ಜೀವನದಲ್ಲಿ ಪ್ರಮುಖ ಘಟ್ಟ. ಅದರ ಬಗ್ಗೆ ನೂರಾರು ಕನಸನ್ನು ಎಲ್ಲರೂ ಹೊಂದುತ್ತಾರೆ. ಹೀಗೆ ನಡೆಯಬೇಕು, ಇಂತಹದ್ದೇ ಕಲ್ಯಾಣ ಮಂಟಪ, ಧಿರಿಸು, ಆಭರಣ, ಭೋಜನದ ಮೆನು,
ಪುಷ್ಪಾಲಂಕಾರ… ಒಂದಾ ಎರಡಾ… ಲಿಸ್ಟ್ ಮುಂದುವರಿಯುತ್ತನೇ ಹೋಗುತ್ತದೆ. ಆದರೆ ಪ್ರಕೃತಿ ಮಡಿಲಲ್ಲಿ ತೆರೆದ ಮಂಟಪ ನಿರ್ಮಿಸಿ ಮಧ್ಯೆ ಆಗುವುದು ವಿಶೇಷ. ಅದರಲ್ಲೂ ಸಮುದ್ರ ತೀರದಲ್ಲಿ. ಸಿಂಪ್ಲಿ ಸೂಪರ್ಬ್.
ಇದೇ ಮೊದಲ ಬಾರಿಗೆ ಕಡಲ ತೀರದಲ್ಲಿ ಯುವ ಜೋಡಿಯೊಂದು ಸಪ್ತಪದಿ ತುಳಿದಿದೆ. ಇದು ಯಾವುದೋ ಮೂವಿ ಸೀನ್ ಅಂದ್ಕೊಂಡ್ರಾ? ಅಲ್ಲಾ… ನಿಜ ಜೀವನದಲ್ಲೇ ನಡೆದಿರುವುದು. ಸಮುದ್ರ ತೀರದಲ್ಲಿ ಸಕ್ಕರೆ ನಾಡಿನ ಜೋಡಿಯೊಂದು ಸಪ್ತಪದಿ ತುಳಿದಿದೆ. ಪ್ರಕೃತಿ ಮಡಿಲಲ್ಲಿ ಸರಳವಾಗಿ ಮದುವೆ ಆಗಿದ್ದರೂ ಪ್ರಕೃತಿಯ ಸೌಂದರ್ಯ ಈ ಮದುವೆಗೆ ಅದ್ದೂರಿತನ ನೀಡಿದೆ. ಈ ಮಧ್ಯೆ ಫೋಟೋಗಳೂ ವೈರಲ್ ಆಗಿದೆ. ಎಲ್ಲಾ ನೆಟ್ಟಿಗರು ಈ ಫೋಟೋಗೆ ವ್ಹಾವ್ ಎಂದು ಹೇಳುತ್ತಿದ್ದಾರೆ.
ಮಂಡ್ಯದ ಲಿಂಗಾಯತ ಸಮುದಾಯದ ಯುವಕ ಯುವತಿ ಕುಂದಾಪುರದ ಎಂ.ಕೋಡಿ ಸಮೀಪ ಬುಧವಾರ ಬೆಳಗ್ಗೆ ಕಡಲ ತೀರದ ಪ್ರಕೃತಿ ಮಡಿಲಲ್ಲಿ ಮದುವೆಯಾದರು. ಕಡಲ ತೀರದಲ್ಲೇ ವಿವಾಹ ಮಂಟಪ ನಿರ್ಮಿಸಲಾಗಿತ್ತು. ಕಟ್ಕೇರಿ ಶಿವಾನಂದ ಐತಾಳ್ ಸುಲಗ್ನೇ ಸಾವಧಾನ ಮಂತ್ರದ ಮಂಗಳ ಸೂತ್ರ ಧಾರಣೆ ಮಾಡಿಸಿದರು. ಬ್ರಾಹ್ಮಣ ಸಂಪ್ರದಾಯ ಪುರೋಹಿತರ ಉಪಸ್ಥಿತಿಯಲ್ಲಿ ಮದುವೆ ಆಗಿದ್ದು, ವಧು-ವರನ ಕಡೆಯವರು ಭಾಗವಹಿಸಿದ್ದರು.