ಹೆಣ್ಣು ಮಕ್ಕಳೇ ಇರದ ಕುಟುಂಬದಲ್ಲಿ ‘ಲಕ್ಷ್ಮಿ’ಯ ಆಗಮನ|ಸಂಭ್ರಮದಿಂದ ಹೆಲಿಕಾಪ್ಟರ್ ಮೂಲಕ ಮನೆಗೆ ಬಂದಿಳಿದ ‘ಹೆಣ್ಣು’ ಮಗು|ತಂದೆ ಮಗಳನ್ನು ಚಾಪರ್‍ನಲ್ಲಿ ಕರೆದುಕೊಂಡು ಬಂದಿಳಿಯುವ ದೃಶ್ಯ ವೈರಲ್

‘ಹೆಣ್ಣು ಮನೆಯ ಕಣ್ಣು’ ಎಂದು ದೇವತೆಯ ಸ್ಥಾನದಲ್ಲಿ ಪೂಜಿಸಲ್ಪಟ್ಟರೆ,ಇನ್ನೂ ಕೆಲವರು ಇಂದಿಗೂ ‘ಹೆಣ್ಣು’ ಎಂಬ ತಾತ್ಸಾರ ಭಾವನೆಯಿಂದಲೇ ನೋಡುತ್ತಿದ್ದಾರೆ. ಗಂಡು ಮಗು ಹುಟ್ಟಿದಾಗ ‘ಹೋ ಗಂಡಾ’ ಎಂದು ಖುಷಿ ಪಡುವವರ ನಡುವೆ ‘ಛೇ ಹೆಣ್ಣು’ ಎಂದು ಹೀಯಾಳಿಸುವ ಜನಗಳೇ ಹೆಚ್ಚು. ಇಂತಹ ತಾರತಮ್ಯದ ನಡುವೆ ಇಲ್ಲೊಂದು ಕುಟುಂಬ ಹೆಣ್ಣು ಮಗು ಹುಟ್ಟಿತ್ತೆಂದು ಅದೆಷ್ಟು ಸಂಭ್ರಮದ ಆಚರಣೆಯಲ್ಲಿ ಮನೆಗೆ ಕರೆ ತಂದಿದ್ದಾರೆ ಗೊತ್ತೇ..?

ಹೌದು. ಹೆಣ್ಣು ಮಗುವನ್ನು ವಿಶೇಷವಾಗಿ ತಮ್ಮ ಕುಟುಂಬಕ್ಕೆ ಬರಮಾಡಿಕೊಂಡ ಘಟನೆ ಪುಣೆಯ ಶೆಲ್ಗಾಂವ್‍ನಲ್ಲಿ ನಡೆದಿದೆ.ಹಲವು ವರ್ಷಗಳ ಬಳಿಕ ವಿಶಾಲ್ ಝರೇಕರ್ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದ್ದೇ ಇವರ ಖುಷಿಗೆ ಕಾರಣವಾಗಿದೆ.

ನಮ್ಮ ಇಡೀ ಕುಟುಂಬದಲ್ಲಿ ಹೆಣ್ಣು ಮಗುವಿರಲಿಲ್ಲ. ಆದರೆ ಇದೀಗ ನಮಗೆ ಹೆಣ್ಣು ಮಗು ಜನಿಸಿದೆ. ಹೀಗಾಗಿ ನಮಗೆ ಹುಟ್ಟಿದ ಮಗುವನ್ನು ವಿಶೇಷವಾಗಿ ಮನೆಗೆ ಬರಮಾಡಿಕೊಳ್ಳಬೇಕೆಂದು ನಿರ್ಧಾರ ಮಾಡಿದೆವು ಎಂದು ಹೇಳಿಕೊಂಡಿದ್ದಾರೆ.ಹುಟ್ಟಿದ ಮಗು ಹೆಣ್ಣು ಅಂತ ಗೊತ್ತಾದ ಕೂಡಲೇ ವಿಶಾಲ್ ಕುಟುಂಬಸ್ಥರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಇದೇ ಖುಷಿಯಲ್ಲಿ ವಿಶಾಲ್ ದಂಪತಿ ತಮ್ಮ ಮಗಳನ್ನು ವಿಶೇಷವಾಗಿ ಚಾಪರ್ ಮೂಲಕ ಮನೆಗೆ ಕರೆದುಕೊಂಡು ಬರಲು ತೀರ್ಮಾನಿಸಿದ್ದಾರೆ.

ಹಾಗೆಯೇ ಪುಟ್ಟ ಲಕ್ಷೀಯನ್ನು 1 ಲಕ್ಷ ನೀಡಿ ಚಾಪರ್ ನಲ್ಲಿ ಕರೆದುಕೊಂಡು ಬಂದೆವು ಎಂದು ಮಗುವಿನ ತಂದೆ ವಿಶಾಲ್ ಪ್ರತಿಕ್ರಿಯಿಸಿದ್ದಾರೆ.ಇದೀಗ ವಿಶಾಲ್ ತಮ್ಮ ಮಗಳನ್ನು ಚಾಪರ್‍ನಲ್ಲಿ ಕರೆದುಕೊಂಡು ಬಂದು ಇಳಿಯುತ್ತಿರುವ ದೃಶ್ಯವನ್ನು ಸೆರೆ ಹಿಡಿಯಲಾಗಿದ್ದು,ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

https://twitter.com/ANI/status/1511371987767414786?s=20&t=ccQtyroHtHXehJgr70FqPQ

ಕೆಲವರು ತಂದೆಯ ಕಾರ್ಯಕ್ಕೆ ಹೆಮ್ಮೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಅಷ್ಟು ಚಿಕ್ಕ ಮಗುವನ್ನು ಹೆಲಿಕಾಪ್ಟರ್ ನಲ್ಲಿ ಯಾಕೆ ಕರೆದುಕೊಂಡು ಬಂದ್ರಿ..?ಜೋರಾದ ಶಬ್ಧದಿಂದ ಮಗುವಿಗೆ ತೊಂದರೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಹೀಗೆ ಹಲವಾರು ಪರ- ವಿರೋಧ ಕಾಮೆಂಟ್ ಗಳು ಬರುತ್ತಿವೆ.ಅಂತೂ ಇಂತಹ ಸಂಭ್ರಮಾಚಾರಣೆ ನೋಡೋದೇ ಖುಷಿ ಅಲ್ವಾ!?

Leave A Reply

Your email address will not be published.