ವಿದ್ಯಾರ್ಥಿಗಳೇ ಗಮನಿಸಿ : ರಾಜ್ಯದಲ್ಲಿ ಈ ಬಾರಿ ” ಶೈಕ್ಷಣಿಕ ವರ್ಷ’ 2 ವಾರ ಮುಂಚಿತವಾಗಿ ಪ್ರಾರಂಭ – ಸಚಿವ ಬಿ ಸಿ ನಾಗೇಶ್
ಬೆಂಗಳೂರು: ಕೊರೊನಾ ಕಾರಣದಿಂದಾಗಿ ಮಕ್ಕಳಲ್ಲಿ ಉಂಟಾಗಿರುವ ಕಲಿಕಾ ಹಿನ್ನಡೆ ಸರಿದೂಗಿಸಲು ಹಮ್ಮಿಕೊಂಡಿರುವ ‘ಕಲಿಕಾ ಚೇತರಿಕೆ’ ಕಾರ್ಯಕ್ರಮದ ಮೂಲಕ ಮಕ್ಕಳ ಕಲಿಕೆ ಸರಿದೂಗಿಸುವ ಪ್ರಯತ್ನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಈ ಬಾರಿ ಶೈಕ್ಷಣಿಕ ವರ್ಷ ಎಂದಿಗಿಂತ 2 ವಾರ ಮುಂಚಿತವಾಗಿ ಪ್ರಾರಂಭವಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಈ ಬಾರಿ ಶೈಕ್ಷಣಿಕ ವರ್ಷ ಎಂದಿಗಿಂತ 2 ವಾರ ಮುಂಚಿತವಾಗಿ ಪ್ರಾರಂಭವಾಗುತ್ತಿದೆ. ವಿವಿಧ ಜಿಲ್ಲೆಗಳ ಪ್ರವಾಸದ ಸಂದರ್ಭದಲ್ಲಿ ಶಿಕ್ಷಕರ ಅಭಿಪ್ರಾಯ ಕೇಳಿದಾಗ, ‘ಈ ಬಾರಿಯ ಶೈಕ್ಷಣಿಕ ವರ್ಷವನ್ನು ಬೇಗ ಆರಂಭಿಸಿ, ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ನಾವೆಲ್ಲ ಸಿದ್ಧ ಎಂದು ಹೇಳಿದಾಗ ನನಗೆ ಅತ್ಯಂತ ಖುಷಿಯಾಯಿತು. ಮಕ್ಕಳ ಶಿಕ್ಷಣದ ಬಗ್ಗೆ ಶಿಕ್ಷಕರಿಗಿರುವ ಆಸಕ್ತಿ ಅಭಿನಂದನಾರ್ಹ’ ಎಂದು ಶಿಕ್ಷಕರ ಉತ್ಸಾಹದ ಕುರಿತು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಡೆಸಿದ ಅಧ್ಯಯನದಲ್ಲಿ ಮಕ್ಕಳ ಕಲಿಕೆಯಲ್ಲಿ ಹೆಚ್ಚು ಹಿನ್ನಡೆಯಾಗಿರುವುದು ಈಗಾಗಲೇ ಬಹಿರಂಗವಾಗಿದೆ. ಅಲ್ಲದೇ ಮಕ್ಕಳ ಪಾಲಕರು, ಶಿಕ್ಷಕರಿಗೂ ಅದರ ಬಗ್ಗೆ ತಿಳಿದಿದೆ. ಹೀಗಾಗಿ, ಕಲಿಕಾ ಹಿನ್ನಡೆ ಸರಿದೂಗಿಸುವ ಶಿಕ್ಷಣ ಇಲಾಖೆಯ ಈ ಪ್ರಯತ್ನದಲ್ಲಿ ಶಿಕ್ಷಕರು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ. ಶಿಕ್ಷಕರು ಈ ಶೈಕ್ಷಣಿಕ ವರ್ಷವನ್ನು ವಿಶೇಷ ಮತ್ತು ಅತ್ಯಂತ ಮುಖ್ಯವಾದ ವರ್ಷವೆಂದು ಪರಿಗಣಿಸಿ ವಿಶೇಷ ಆಸಕ್ತಿಯಿಂದ ಬೋಧನೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.