ಉಪ್ಪಿನಂಗಡಿ : ಹಿಜಾಬ್ ವಿಷಯ ವ್ಯಾಟ್ಸಾಪ್‌ನಲ್ಲಿ ಶೇರ್ : ಹರ್ಷನ ಹಾಗೇ ಸಾಯುತ್ತಿಯಾ ಎಂದು ಕೊಲೆ ಬೆದರಿಕೆ ಹಾಕಿದ ತಂಡ | ಹೆದರಿ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಯತ್ನ | ಕೈ ಕಾಲು ಕಳೆದುಕೊಂಡ ಯುವಕ
ಉಪ್ಪಿನಂಗಡಿ: ಹಿಜಾಬ್ ವಿಷಯವಾಗಿ ವಾಟ್ಸಫ್‌ನಲ್ಲಿ ಶೇರ್ ಮಾಡಿದಕ್ಕೆ ಬಂದ ಬೆದರಿಕೆಗೆ ಮಣಿದು ಉಪ್ಪಿನಂಗಡಿಯ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿ ಕೈಕಾಲುಗಳನ್ನು ಕಳೆದುಕೊಂಡ ಘಟನೆ ನಡೆದಿದ್ದು, ಈತನನ್ನು ಬೆದರಿಸಿ ಆತ್ಮಹತ್ಯೆಗೆ ಪ್ರಚೋದಿಸಿದವರ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರೇಬಂಡಾಡಿ ಗ್ರಾಮದ ಮದ್ಮೆತ್ತಿಮಾರ್ ನಿವಾಸಿ ಪುರುಷೋತ್ತಮ ಯಾನೆ ಪ್ರಶಾಂತ್ (25) ಕೈ ಕಾಲುಗಳನ್ನು ಕಳೆದುಕೊಂಡ ಯುವಕ. ಟ್ಯಾಂಕರ್ ಚಾಲಕನಾಗಿ ದುಡಿಯುತ್ತಿದ್ದ ಈತ ಎ.1ರಂದು ಬೆಳಗ್ಗೆ ಇಂದ್ರಾಳಿ ಬಳಿಯ ರೈಲ್ವೆ ಹಳಿಯಲ್ಲಿ ಪ್ರಜ್ಞಾಹೀನನಾಗಿ ಕೈ- ಕಾಲುಗಳನ್ನು ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿರುವ ಈತ ಎಲ್ಲಾ ಧರ್ಮದ ಸ್ನೇಹಿತರು ನನ್ನೊಂದಿಗೆ ಇದ್ದು, ಈವರೆಗೆ ಕೋಮು ದ್ವೇಷ ಹರಡುವ ಕೆಲಸ ಮಾಡಿಲ್ಲ. ಆದರೆ ಕೆಲವು ದಿನಗಳ ಹಿಂದೆ ಕರ್ನಾಟಕ ಹೈಕೋರ್ಟ್ ಹಿಜಾಬ್‌ನ ವಿಷಯವಾಗಿ ನೀಡಿದ ತೀರ್ಪನ್ನು ಸ್ವಾಗತಿಸಿ, ಇದು ಸಂವಿಧಾನಬದ್ಧ ಎಂದು ವಾಟ್ಸಫ್‌ನಲ್ಲಿ ಇದನ್ನು ಷೇರ್ ಮಾಡಿದ್ದೆ. ಇದಕ್ಕೆ ಎಂಆರ್‌ಪಿಎಲ್‌ನಲ್ಲಿ ಸ್ವಂತ ಟ್ಯಾಂಕರ್ ಹೊಂದಿ ವ್ಯವಹಾರ ನಡೆಸುತ್ತಿರುವ ಸಕಲೇಶಪುರದ ಲೋಹಿತ್ ಎಂಬವರು ಮಾ.29ರಂದು ನನ್ನನ್ನು ಕರೆದು, ಹಿಜಾಬ್ ವಿಷಯವಾಗಿ ಬಾರಿ ಷೇರ್ ಮಾಡುತ್ತೀಯಾ ಎಂದು ಅವ್ಯಾಚ್ಯವಾಗಿ ನಿಂದಿಸಿ, ನೀನು ಟ್ಯಾಂಕರ್ ಬಿಡದ ಹಾಗೆ ನಿನ್ನ ಕೈ- ಕಾಲು ತುಂಡು ಮಾಡುತ್ತೇನೆ ಎಂದಿದ್ದಲ್ಲದೆ, ಕೊಲೆ ಬೆದರಿಕೆಯನ್ನೂ ಹಾಕಿದ್ದರು. ಮರುದಿನ ಸಂಜೆ ಪುನಹ ರೋಹಿತ್ ಅವರು ನನಗೆ ಕರೆ ಮಾಡಿದ್ದಲ್ಲದೆ, ಪರಿಚಯದ ಚಾಲಕರಾಗಿರುವ ಶಫೀಕ್ ಕೋಲ್ಪೆ, ಮೊಹಮ್ಮದ್ ಇಜಾಬ್, ಚಿದಾನಂದ, ಧನಂಜಯ, ಉಮೇಶ್ ಮತ್ತಿತರರು ಕೊಲೆ ಬೆದರಿಕೆ ಹಾಕಿದ್ದಲ್ಲದೆ, ಅದೇ ದಿನ ರಾತ್ರಿ ನಾನು ಎಂಆರ್‌ಪಿಎಲ್‌ಗೆ ಬಂದಾಗ ನನ್ನ ಮೊಬೈಲ್ ಕಸಿದು, ನನಗೆ ಹಲ್ಲೆ ನಡೆಸಿ, “ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ. ನಿನ್ನ ಮನೆಯವರ ಎಲ್ಲಾ ಮಾಹಿತಿಯೂ ನಮಗಿದೆ. ಎಲ್ಲರಿಗೂ ಒಂದು ಗತಿ ಕಾಣಿಸುತ್ತೇವೆ. ನಮ್ಮ ನೆಟ್‌ವರ್ಕ್ ನಿನಗೆ ಗೊತ್ತಿಲ್ಲ. ಹರ್ಷನ ಹಾಗೆ ಸಾಯುತ್ತೀಯ” ಎಂದು ಬೆದರಿಸಿದ್ದರು. ಇದರಿಂದ ಮನನೊಂದ ನಾನು ಮಾ.31ರಂದು ಮಣಿಪಾಲಕ್ಕೆ ತೆರಳಿ ಇಂದ್ರಾಳಿ ರೈಲ್ವೆ ನಿಲ್ದಾಣ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದರ ಪರಿಣಾಮ ನನ್ನ ಬಲ ಕಾಲು ಹಾಗೂ ಎಡ ಕೈಯನ್ನು ಕಳೆದುಕೊಂಡಿದ್ದೇನೆ” ಎಂದು ಸುರತ್ಕಲ್ ಪೊಲೀಸರಿಗೆ ನೀ ದೂರಿನಲ್ಲಿ ತಿಳಿಸಿದ್ದಾರೆ.