ಮಂಗಳೂರು : ಮಂತ್ರ ಮಾಂಗಲ್ಯ ಮಾದರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ
ಮಂಗಳೂರು : ಮಂತ್ರ ಮಾಂಗಲ್ಯಮಾದರಿಯಲ್ಲಿ ಜೋಡಿಯೊಂದು ಮಂಗಳೂರಿನಲ್ಲಿ ಮದುವೆಯಾಗಿದ್ದಾರೆ.
ಛಾಯಾಗ್ರಾಹಕ ವಿವೇಕ್ ಗೌಡ ಮತ್ತು ಶಿವಾನಿ ಶೆಟ್ಟಿ ಎಂಬ ಜೋಡಿ ಮಂಗಳೂರಿನ ಹಳೆಯ ಮನೆಯ ಮುಂಭಾಗ, ಮರಗಿಡಗಳ ನಡುವೆ ಹಾಕಲಾಗಿದ್ದ ಸಣ್ಣವೇದಿಕೆಯಲ್ಲಿ ಪುರೋಹಿತರು,ಮಂತ್ರಘೋಷ, ಉಡುಗೊರೆ, ಅದ್ದೂರಿ ಊಟ ಇಲ್ಲದೇ ನೂರು ಜನ ಬಂಧುಮಿತ್ರರ ಸಮ್ಮುಖದಲ್ಲಿ ಮದುವೆಯಾಗಿದೆ.
ಮಂತ್ರ ಮಾಂಗಲ್ಯ ರಾಷ್ಟ್ರಕವಿ ಕುವೆಂಪು ಹುಟ್ಟು ಹಾಕಿದ ಪರಿಕಲ್ಪನೆ. ಅದ್ದೂರಿ ಮದುವೆ ಬಡವರ ಪಾಲಿಗೆ ಶಾಪವಾಗುವುದನ್ನು ವಿರೋಧಿಸಿ ಕುವೆಂಪು ತಮ್ಮಮಗ ಪೂರ್ಣಚಂದ್ರ ತೇಜಸ್ವಿ ಅವರಿಗೆ ಮಂತ್ರ ಮಾಂಗಲ್ಯ ಮಾದರಿಯಲ್ಲೇ ಮದುವೆ ಮಾಡಿಸಿದ್ದರು.
ಮಂಗಳೂರಿನ ವಿವೇಕ್ ಗೌಡ-ಶಿವಾನಿ ಶೆಟ್ಟಿ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರು. ಹೆತ್ತವರ ಒಪ್ಪಿಗೆಯ ಪ್ರಕಾರ ಸಮಾನಮನಸ್ಕರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಪುರೋಹಿತರಿಲ್ಲದ ಮದುವೆಯಲ್ಲಿ ಮಂತ್ರ ಮಾಂಗಲ್ಯ ಪ್ರಮಾಣವಚನವನ್ನು ಸ್ವೀಕರಿಸಿ ಮಾಂಗಲ್ಯ ಕಟ್ಟಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.