ಉಡುಪಿಯಲ್ಲಿ ಮುಸ್ಲಿಂ ಗ್ರಾಹಕರು ಅಗತ್ಯವಿಲ್ಲ ಎನ್ನುವ ಪೋಸ್ಟರ್ ವೈರಲ್!! ಹೆಸರಾಂತ ಮಳಿಗೆಯೊಂದರ ಪೋಸ್ಟರ್ ತಿರುಚಿದ ಹಿಂದಿರುವ ಕೈ ಯಾವುದು!?
ಉಡುಪಿಯ ಹೆಸರಾಂತ ಬಟ್ಟೆ ಮಳಿಗೆಯೊಂದಕ್ಕೆ ಮುಸ್ಲಿಂ ಗ್ರಾಹಕರ ಅಗತ್ಯ ಇಲ್ಲ ಎನ್ನುವ ಪೋಸ್ಟರ್ ಒಂದು ವೈರಲ್ ಆಗಿದ್ದು, ವಿಷಯ ತಿಳಿಯುತ್ತಿದ್ದಂತೆ ಮಳಿಗೆಯ ಮಾಲೀಕ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಕನ್ನಡ, ಉಡುಪಿ, ಸಹಿತ ಹೊರರಾಜ್ಯಗಳಲ್ಲಿ ತನ್ನ ಅಂಗಸಂಸ್ಥೆಗಳನ್ನು ಹೊಂದಿರುವ ಹೆಸರಾಂತ ಬಟ್ಟೆ ಮಳಿಗೆ ‘ಜಯಲಕ್ಷ್ಮಿ ಸಿಲ್ಕ್ಸ್’ನ ಉದ್ಯಾವರದಲ್ಲಿರುವ ಮಳಿಗೆಯ ಪೋಸ್ಟರ್ ಒಂದನ್ನು ಕದ್ದು, ನಮ್ಮಲ್ಲಿ ಮುಸ್ಲಿಂ ಗ್ರಾಹಕರಿಗೆ ಅವಕಾಶ ಇಲ್ಲ,ನಮಗೆ ಅವರ ಅಗತ್ಯವೂ ಇಲ್ಲ ಎನ್ನುವಂತೆ ಬರಹ ತಿರುಚಿ ವೈರಲ್ ಮಾಡಲಾಗಿದೆ.
ಹಿಜಾಬ್ ವಿವಾದದ ಬಳಿಕ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹಿಂದೂ ಮುಸ್ಲಿಂ ಭಾಯಿ ಭಾಯಿ ಎನ್ನುವುದೇ ಮರೆತಿದ್ದು, ಹಾವು ಮುಂಗುಸಿಗಳಂತೆ ಎಲ್ಲಾ ವಿಚಾರದಲ್ಲೂ ವಿರೋಧಿಸುವ, ಛೂ ಬಿಡುವ ಕಿಡಿಗೇಡಿಗಳ ಬಣವೊಂದು ಕಾರ್ಯಚರಿಸುತ್ತಿದೆ. ಪರಿಸ್ಥಿತಿಯ ಲಾಭ ಪಡೆದುಕೊಳ್ಳುವ ಕೆಲ ಕಿಡಿಗೇಡಿಗಳು ಈ ರೀತಿಯ ಕೃತ್ಯಕ್ಕೆ ಇಳಿದಿದ್ದಾರೆ ಎನ್ನುತ್ತಿದೆ ನಾಗರೀಕ ಸಮಾಜ.
ದೇವಾಲಯಗಳ ಜಾತ್ರೆಯ ಸಂದರ್ಭ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸಿದ ಬೆನ್ನಲ್ಲೇ ಇಂತಹ ಕೆಲ ಹಿಂದೂ ಹೆಸರಿನ ಮಳಿಗೆಗಳು, ಉದ್ಯಮಗಳ ಮೇಲೆ ಕಣ್ಣಿಟ್ಟಿರುವ ಕಿಡಿಗೇಡಿಗಳ ಗುಂಪು ಈ ರೀತಿಯ ದುರ್ವರ್ತನೆ ತೋರುತ್ತಿದ್ದು, ಸದ್ಯ ವ್ಯಾಪಾರವನ್ನೇ ನಂಬಿ ಬದುಕುವ ಸಮಾಜಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಇದರ ಹಿಂದಿರುವ ಕೈ ಮುಸ್ಲಿಮರದ್ದೋ, ಹಿಂದೂಗಳದ್ದೋ ಎನ್ನುವ ಪ್ರಶ್ನೆಗೆ ಪೊಲೀಸರ ತನಿಖೆಯ ಬಳಿಕವೇ ಉತ್ತರ ಸಿಗಲಿದೆ.