ಪೋಸ್ಟ್-ವೆಡ್ಡಿಂಗ್ ಫೋಟೋ ಶೂಟ್ ಹುಚ್ಚು-ದಂಪತಿಗಳ ಬಾಳಿನಲ್ಲಿ ನಡೆಯಿತು ದುರಂತ!! ಮದುವೆಯಾದ ಒಂದೇ ವಾರದಲ್ಲಿ ವರ ಸಾವು-ವಧು ಗಂಭೀರ

ಮದುವೆಯ ನಂತರದ ಫೋಟೋ ಶೂಟ್ ಗಾಗಿ ನದಿಗೆ ತೆರಳಿದ್ದ ನವ ದಂಪತಿಗಳ ಬಾಳಿನಲ್ಲಿ ದುರಂತವೇ ನಡೆದುಹೋಗಿದ್ದು, ನವ ವರ ಮೃತಪಟ್ಟು ವಧು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆಯು ಕೇರಳದ ಕುಟ್ಟಿಯಾಡಿ ಎಂಬಲ್ಲಿ ನಡೆದಿದೆ. ಮೃತ ವರನನ್ನು ರೆಜಿಲ್ ಎಂದು ಗುರುತಿಸಲಾಗಿದೆ.

 

ಘಟನೆ ವಿವರ: ಮೃತ ರೆಜಿಲ್ ತನ್ನ ಪತ್ನಿ ಕಾರ್ತಿಕಾ ರೊಂದಿಗೆ ಮದುವೆಯ ಒಂದು ವಾರದ ಬಳಿಕ ಪೋಸ್ಟ್ ವೆಡ್ಡಿಂಗ್ ಶೂಟ್ ನಡೆಸಲು ನದಿಗೆ ತೆರಳಿದ್ದರು ಎನ್ನಲಾಗಿದೆ. ಕುಟ್ಟಿಯಾಡಿ ಎಂಬಲ್ಲಿಯ ನದಿಯೊಂದರಲ್ಲಿ ದಂಪತಿಗಳು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವಾಗ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ.

ಇಬ್ಬರ ಕೂಗು ಕೇಳಿದ ಸ್ಥಳೀಯರು ಕೂಡಲೇ ಸ್ಥಳಕ್ಕಾಗಮಿಸಿ ಇಬ್ಬರನ್ನೂ ನೀರಿನಿಂದ ಮೇಲೆ ಎತ್ತಿ ಪ್ರಥಮ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಈ ವೇಳೆಗಾಗಲೇ ವರ ರೆಜಿಲ್ ಕೊನೆಯುಸಿರೆಳೆದಿದ್ದು, ವಧು ಕಾರ್ತಿಕಾರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

ಕೇರಳ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರೀ-ವೆಡ್ಡಿಂಗ್, ಪೋಸ್ಟ್-ವೆಡ್ಡಿಂಗ್ ಫೋಟೋ ಶೂಟ್ ಗಳು ಹೆಚ್ಚಾಗಿದ್ದು, ಸುರಕ್ಷಿತ ಕ್ರಮಗಳನ್ನು ಪಾಲಿಸದ ಜೋಡಿಗಳು ಬೇಕಾಬಿಟ್ಟಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುವುದೇ ಇಂತಹ ಅನಾಹುತಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

Leave A Reply

Your email address will not be published.