ಕುರೂಪಿ ಹೆಣ್ಣುಮಕ್ಕಳಿಗೆ ಮದುವೆಯಾಗಲು ವರದಕ್ಷಿಣೆ ಸಹಕಾರಿ !?? | ನರ್ಸಿಂಗ್ ವಿದ್ಯಾರ್ಥಿಗಳ ಪಠ್ಯಪುಸ್ತಕದಲ್ಲಿ ವಿವಾದಾತ್ಮಕ ಸಾಲು

ವರದಕ್ಷಿಣೆ ಎಂಬುದು ಸಮಾಜದಲ್ಲಿ ವ್ಯಾಪಕವಾಗಿ ಬೇರೂರಿರುವ ಪಿಡುಗು. ಅತಿ ಹೆಚ್ಚಾಗಿ ಮಹಿಳೆಯರ ಪೋಷಣೆಗೆ ಕಾರಣವಾಗಿರುವ ಇದು ಇಂದಿನ ಕಾಲದಲ್ಲೂ ಪ್ರಚಲಿತದಲ್ಲಿದೆ. ಹೀಗಿರುವಾಗ ಭಾರತೀಯ ನರ್ಸಿಂಗ್ ಸಿಲೆಬಸ್‌ನಲ್ಲಿ ಸಮಾಜಶಾಸ್ತ್ರ ಪಠ್ಯ ಪುಸ್ತಕದಲ್ಲಿ ವರದಕ್ಷಿಣೆ ಬಗ್ಗೆ ಇರುವ ಪಾಠವೊಂದು ಇದೀಗ ವಿವಾದ ವಸ್ತುವಾಗಿದೆ.

ವರದಕ್ಷಿಣೆ ವ್ಯವಸ್ಥೆಯು ಕುರೂಪಿ ಹುಡುಗಿಯರಿಗೆ ಮದುವೆಯಾಗಲು ಸಹಾಯ ಮಾಡುತ್ತದೆ ಎಂದು ಪಠ್ಯ ಪುಸ್ತಕದಲ್ಲಿ ನಮೂದಿಸಲಾಗಿದೆ. ಈ ಪುಸ್ತಕ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಟಿಕೆ ಇಂದ್ರಾಣಿ ಅವರು ಬರೆದಿರುವ ದಾದಿಯರ ಸಮಾಜಶಾಸ್ತ್ರದ ಪಠ್ಯಪುಸ್ತಕದ (Textbook of Sociology for Nurses)ಪುಟ ಇದು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ.

ಈ ಪುಸ್ತಕದಲ್ಲಿ “ವರದಕ್ಷಿಣೆಯ ಉದ್ದೇಶ” ಎಂಬ ಉಪಶೀರ್ಷಿಕೆಯ ಅಡಿಯಲ್ಲಿ ಈ ಸಂಗತಿಗಳನ್ನು ಪಟ್ಟಿ ಮಾಡಲಾಗಿದೆ. ಈ ಪುಸ್ತಕವು ನರ್ಸಿಂಗ್ ವಿದ್ಯಾರ್ಥಿಗಳಿರುವ ಪುಸ್ತಕವಾಗಿದ್ದು ಭಾರತೀಯ ನರ್ಸಿಂಗ್ ಕೌನ್ಸಿಲ್ ಪಠ್ಯಕ್ರಮದ ಪ್ರಕಾರ ಬರೆಯಲಾಗಿದೆ ಎಂದು ಪುಸ್ತಕದ ಕವರ್ ಮೇಲಿದೆ.

ಪುಟದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಶಿವಸೇನಾ ನಾಯಕಿ ಮತ್ತು ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಲ್ಲಿ ಈ ಪಠ್ಯವನ್ನು ತೆಗೆದುಹಾಕುವಂತೆ ಕರೆ ನೀಡಿದ್ದಾರೆ. ಇಂಥಾ ಪುಸ್ತಕಗಳು ಕಾಲೇಜು ಮಟ್ಟದ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಭಾಗವಾಗಿರುವುದು ಭಯಾನಕವಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಪುಸ್ತಕದಲ್ಲೇನಿದೆ??

ಪುಸ್ತಕದಲ್ಲಿ ಪಟ್ಟಿ ಮಾಡಿದ ವರದಕ್ಷಿಣೆಯ ಪ್ರಯೋಜನದ ಪಟ್ಟಿಯಲ್ಲಿ ಪೀಠೋಪಕರಣಗಳು, ರೆಫ್ರಿಜರೇಟರ್‌ಗಳು ಮತ್ತು ವಾಹನಗಳಂತಹ ಉಪಕರಣಗಳೊಂದಿಗೆ ಹೊಸ ಮನೆಯನ್ನು ಸಜ್ಜುಗೊಳಿಸಲು ವರದಕ್ಷಿಣೆ ಸಹಾಯಕವಾಗಿದೆ. ಪೋಷಕರ ಆಸ್ತಿಯಲ್ಲಿ ಪಾಲನ್ನು ಹುಡುಗಿಯರು ವರದಕ್ಷಿಣೆ ಮೂಲಕ ಪಡೆಯುತ್ತಾರೆ. ವರದಕ್ಷಿಣೆ ಎಂಬುದು ನಮ್ಮ ಸಾಮಾಜಿಕ ಪಾರಂಪರಿಕ ಪದ್ದತಿಯಾಗಿದ್ದು ಒಮ್ಮೆಗೇ ಪದ್ಧತಿಗಳನ್ನು ನಿರ್ಮೂಲನೆ ಮಾಡುವುದು ಅಸಾಧ್ಯ.

ಪೋಷಕರು ಈಗ ತಮ್ಮ ಹೆಣ್ಣುಮಕ್ಕಳಿಗೆ ಕಡಿಮೆ ವರದಕ್ಷಿಣೆ ನೀಡುವ ಉದ್ದೇಶದಿಂದ ಶಿಕ್ಷಣವನ್ನು ನೀಡುತ್ತಿದ್ದಾರೆ. ಪುಟದ ಕೊನೆಯ ಅಂಶವು ವರದಕ್ಷಿಣೆ ವ್ಯವಸ್ಥೆಯು ಕುರೂಪಿ ಹುಡುಗಿಯರಿಗೆ ಮದುವೆಯಾಗಲು ಸಹಾಯ ಮಾಡುತ್ತದೆ ಎಂದು ಹೇಳುತ್ತದೆ.

Leave A Reply

Your email address will not be published.