ಪ್ರಾಣಿ ವಧೆಗೆ ಸ್ಟನ್ನಿಂಗ್ ಕಡ್ಡಾಯ!|ಇಂತಹ ಆದೇಶವನ್ನೇ ಹೊರಡಿಸಿಲ್ಲ,ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ ಪಶುಸಂಗೋಪನಾ ಇಲಾಖೆಯ ಸಚಿವರು
ಬೆಂಗಳೂರು:ಪ್ರಾಣಿಗಳಿಗೆ ಹಿಂಸೆ ನೀಡದೆ ವಧೆ ಮಾಡುವ ದೃಷ್ಟಿಯಿಂದ,ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿಚಾರದ ನಡುವೆ ಪಶು ಸಂಗೋಪನಾ ಇಲಾಖೆ ಪ್ರಾಣಿ ವಧೆ ವೇಳೆ ಸ್ಟನ್ನಿಂಗ್ ಕಡ್ಡಾಯ ಎಂಬ ಮಹತ್ವದ ಆದೇಶ ಹೊರಡಿಸಿದೆ ಎಂಬ ಸುಳ್ಳು ಸುದ್ದಿ ಹರಡಿದ್ದು, ಇದೀಗ ಸಚಿವ ಪ್ರಭು ಚೌಹಾಣ್ ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ.
ಹಲಾಲ್ ಕಟ್ ನಿಷೇಧ, ಸ್ಟನ್ನಿಂಗ್ ಕಡ್ಡಾಯದ ಬಗ್ಗೆ ಇಲಾಖೆಗೆ ಪತ್ರ ಬಂದಿದೆ ಅಷ್ಟೇ. ಆದರೆ ಇಲಾಖೆಯಿಂದ ಈವರೆಗೆ ಯಾವುದೇ ಆದೇಶ ಹೊರಡಿಸಿಲ್ಲ. ಪತ್ರದ ಬಗ್ಗೆ ನಾನು ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಸ್ಟನ್ನಿಂಗ್ ಮೆಥಡ್ನಿಂದ ಪ್ರಾಣಿಗಳು ನರಳಾಟದಿಂದ ಸಾಯೋದಿಲ್ಲ. ಸ್ಟನ್ನಿಂಗ್ ವೇಳೆ ಪ್ರಾಣಿಗಳ ತಲೆಗೆ ಜೋರಾಗಿ ಹೊಡೆಯಲಾಗುತ್ತದೆ. ಆಗ ಪ್ರಾಣಿಗಳ ತಲೆಗೆ ಪೆಟ್ಟು ಬಿದ್ದು ಅವುಗಳ ಮೆದುಳು ನಿಷ್ಕ್ರಿಯಗೊಳ್ಳುತ್ತದೆ. ಆ ವೇಳೆ ಪ್ರಾಣಿಗಳನ್ನು ವಧೆ ಮಾಡಲಾಗುತ್ತದೆ. ಹೀಗೆ, ಇನ್ನು ಮುಂದೆ ಕೋಳಿ, ಕುರಿ ಅಂಗಡಿಗಳಿಗೆ ಲೈಸೆನ್ಸ್ ಕೊಡುವಾಗಲೂ ಸ್ಟನ್ನಿಂಗ್ ಫೆಸಿಲಿಟಿ ಕಡ್ಡಾಯ ಆಗಿ ಇರಲೇಬೇಕು.ಸ್ಟನ್ನಿಂಗ್ ಫೆಸಿಲಿಟಿ ಇಲ್ಲದೆ ಹೋದರೆ ಪರವಾನಗಿ ನೀಡಬಾರದು ಎಂಬೆಲ್ಲ ಸುಳ್ಳು ಸುದ್ದಿ ಹರಡಿತ್ತು.
ಸ್ಟನ್ನಿಂಗ್ ಕಡ್ಡಾಯ ಮಾಡಬೇಕು ಎಂಬುದು ಜಟ್ಕಾ ಕಟ್ ಬೆಂಬಲಿಗರ ಅಭಿಪ್ರಾಯವಾಗಿದೆ.ಆದರೆ ಸಚಿವ ಪ್ರಭು ಚೌಹಾಣ್, ಪಶುಸಂಗೋಪನಾ ಇಲಾಖೆಯಿಂದ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಹೇಳುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.